‘ಆಯ್ತಪ್ಪ ನಡೀ. ಈಗ್ಲೇ ಚುನಾವಣೆಗೆ ಹೋಗೋಣ’ ಎಂಬ ಸಿದ್ದರಾಮಯ್ಯ ಸವಾಲಿಗೆ ಮಾರಿ ಹಬ್ಬದ ಪ್ರತ್ಯುತ್ತರ ಕೊಟ್ಟ ಬಿಜೆಪಿ

ಬೆಂಗಳೂರು: ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ಸದನದ ಒಳ-ಹೊರಗೆ ಮುಂದಿನ ಚುನಾವಣೆ ಬಗ್ಗೆಯೇ ಚರ್ಚೆ ಸುತ್ತುತ್ತಿದ್ದು, ಈ ಕುರಿತ ಸವಾಲ್‌-ಜವಾಬ್‌ಗೆ ವಿಧಾನಸಭೆ ಸೋಮವಾರ ಸಾಕ್ಷಿಯಾಯಿತು. ಆಯವ್ಯಯದ ಅಂದಾಜಿನ ಮೇಲೆ ಪ್ರತಿಪಕ್ಷ ನಾಯಕ ಅವರು ಸೋಮವಾರ ಮಾತನಾಡುವಾಗ ಚುನಾವಣೆ ವಿಚಾರ ಪ್ರಸ್ತಾಪವಾಯಿತು. ವಿಧಾನಸಭೆ ವಿಸರ್ಜಿಸಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರೆ, ಆಡಳಿತ ಪಕ್ಷದವರು ಇದಕ್ಕೆ ತಿರುಗೇಟು ಕೊಟ್ಟರು. ಒಂದು ಹಂತದಲ್ಲಿ ಸಿಎಂ ಅವರೇ ‘ಪ್ರತಿಪಕ್ಷ ನಾಯಕರು ಹೇಳಿದಂತೆ ಮಾರಿಹಬ್ಬಕ್ಕೆ ನಾವು ತಯಾರಿದ್ದೇವೆ. ಆದರೆ, ಯಾರಿಗೆ ಮಾರಿಹಬ್ಬ ಎನ್ನುವುದು 2023ಕ್ಕೆ ಗೊತ್ತಾಗಲಿದೆ’ ಎಂದು ಸವಾಲೆಸೆದರು. ಇದಕ್ಕೆ ‘ನಿಮ್ಮ ಮಾರಿಹಬ್ಬದ ಸವಾಲು ಸ್ವೀಕರಿಸಲು ನಾವೂ ಸಿದ್ಧರಿದ್ದೇವೆ’ ಎಂದು ಸಿದ್ದರಾಮಯ್ಯ ಪ್ರತಿ ಸವಾಲು ಹಾಕಿದರು. ಚುನಾವಣೆ ವಿಚಾರವಾಗಿ ಸದನದಲ್ಲಿ ಮೊದಲು ಚಕಮಕಿ ನಡೆದದ್ದು ಸಿದ್ದರಾಮಯ್ಯ ಮತ್ತು ಸಚಿವ ಕೆ.ಎಸ್‌.ಈಶ್ವರಪ್ಪ ನಡುವೆ. ಸಿದ್ದರಾಮಯ್ಯ ತಮ್ಮ ಸರಕಾರದ ಅವಧಿಯಲ್ಲಿ ಪ್ರಣಾಳಿಕೆ ಭರವಸೆ ಈಡೇರಿಸಿದ್ದರ ಬಗ್ಗೆ ಹೇಳಿದಾಗ ಈಶ್ವರಪ್ಪ ತಕರಾರು ತೆಗೆದರು. ‘ನಿಮ್ಮ ಪ್ರಣಾಳಿಕೆ ಭರವಸೆ ಮತ್ತು ಅದರಲ್ಲಿ ಈಡೇರಿದ್ದರ ಬಗ್ಗೆ ಪಟ್ಟಿ ಕೊಡಿ. ಅದು ನಿಜವಾಗಿದ್ದರೆ ನೀವು ಹೇಳಿದಂತೆ ಕೇಳುತ್ತೇನೆ’ ಎನ್ನುವುದು ಈಶ್ವರಪ್ಪ ಸವಾಲಾಗಿತ್ತು. ಈ ಚರ್ಚೆ ಬೆಳೆದು ‘ಶಿವಮೊಗ್ಗದಲ್ಲಿ ಯಡಿಯೂರಪ್ಪ ಆಶೀರ್ವಾದವಿಲ್ಲದೆ ನೀವು ಗೆಲ್ಲುವುದಿಲ್ಲ’ ಎಂದು ಈಶ್ವರಪ್ಪ ಅವರಿಗೆ ಸಿದ್ದರಾಮಯ್ಯ ಕಿಚಾಯಿಸಿದರು. ಮುಖ್ಯಮಂತ್ರಿಯಾಗಿದ್ದಾಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದನ್ನು ಸಿದ್ದರಾಮಯ್ಯ ಅವರಿಗೆ ಈಶ್ವರಪ್ಪ ನೆನಪಿಸಿದರು. 2013ರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದನ್ನು ಸಿದ್ದರಾಮಯ್ಯ ಅವರೂ ನೆನಪು ಮಾಡಿಕೊಟ್ಟರು. ಬಳಿಕ ಪುನಃ ಜನರ ಆಶೀರ್ವಾದ ಪಡೆದ ಬಿಜೆಪಿ ಅಧಿಕಾರಕ್ಕೆ ಬಂದಿರುವುದಾಗಿ ಈಶ್ವರಪ್ಪ ತಮ್ಮ ವಾದಸರಣಿಯನ್ನು ಹರಿತಗೊಳಿಸಿದರು. ‘ಆಯ್ತಪ್ಪ ನಡೀ. ಈಗ್ಲೇ ಚುನಾವಣೆಗೆ ಹೋಗೋಣ. ಅಸೆಂಬ್ಲಿ ವಿಸರ್ಜಿಸಿ’ ಎಂದು ಸಿದ್ದರಾಮಯ್ಯ ಪಂಥಾಹ್ವಾನ ಕೊಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ ‘ಸ್ವಾಮೀ, ಈಗ ಚುನಾವಣೆಗೆ ಹೋದರೆ ನಿಮಗೆ ಈಗಿರುವಷ್ಟು ಸೀಟೂ ಬರುವುದಿಲ್ಲ. ಸುಮ್ಮನಿದ್ದು ಬಿಡಿ’ ಎಂದು ಲೇವಡಿ ಮಾಡಿದರು. ಸಿದ್ದರಾಮಯ್ಯ ಮಾತ್ರ ವಿಧಾನಸಭೆ ವಿಸರ್ಜಿಸುವಂತೆ ಪಟ್ಟು ಹಿಡಿದರು. ಮಧ್ಯೆ ಪ್ರವೇಶಿಸಿದ ಸಿಎಂ ಬೊಮ್ಮಾಯಿ, 2023ಕ್ಕೆ ಮಾರಿಹಬ್ಬ ಕಾಂಗ್ರೆಸ್‌ಗೆ ಕಾದಿದೆ ಎನ್ನುವ ಮೂಲಕ ಚರ್ಚೆಯನ್ನು ಬೇರೆ ದಿಕ್ಕಿಗೆ ಕೊಂಡೊಯ್ದರು. ಧೂಳೀಪಟ ಮಾಡ್ತೇವೆ!ಮಾರಿಹಬ್ಬದ ಸವಾಲಿಗೆ ಕಾಂಗ್ರೆಸ್‌ ಸಿದ್ಧವಿರುವುದಾಗಿ ಸಿದ್ದರಾಮಯ್ಯ ಹೇಳಿದರೆ, ಸಚಿವ ಆರ್‌.ಅಶೋಕ್‌ ಕಾಂಗ್ರೆಸ್‌ನ ಒಳಜಗಳದಿಂದ ಬಚಾವಾಗುವಂತೆ ಪ್ರತಿಪಕ್ಷದ ನಾಯಕರ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು. ‘ನೀವೇನೋ ನಮ್ಮ ವಿರುದ್ಧ ಹೋರಾಟ ಮಾಡಬಹುದು. ಶತ್ರುಗಳ ಜತೆ ಯುದ್ಧ ಸುಲಭ. ಸ್ನೇಹಿತರನ್ನು ಎದುರಿಸುವುದು ಕಷ್ಟ. ಮೊದಲು ಕಾಂಗ್ರೆಸ್‌ನಲ್ಲಿ ಸರಿ ಮಾಡಿಕೊಳ್ಳಿ. ಮೇಕೆದಾಟು ಪಾದಯಾತ್ರೆ ಬ್ಯಾನರ್‌ಗಳಲ್ಲಿ ನಿಮ್ಮ ಫೋಟೊನೂ ಇರಲಿಲ್ಲ’ ಎಂದು ಕಾಲೆಳೆದರು. ‘ಹಾಗೇನೂ ಇಲ್ಲ. ನಿಮ್ಮ ವಿರುದ್ಧ ಹೋರಾಟಕ್ಕೆ ನಾವು ರೆಡಿಯಿದ್ದೇವೆ. ನಿಮ್ಮನ್ನು ಧೂಳಿಪಟ ಮಾಡ್ತೇವೆ. ಬ್ಯಾನರ್‌ನಲ್ಲಿ ಫೋಟೊ ಇರುವುದು ಮುಖ್ಯವಲ್ಲ. ರಾಜ್ಯದ ಜನರಿಗೆ ನನ್ನ ಪರಿಚಯವಿದೆ’ ಎಂದು ಸಿದ್ದರಾಮಯ್ಯ ತಿರುಗೇಟು ಕೊಟ್ಟರು.


from India & World News in Kannada | VK Polls https://ift.tt/0R1UpN3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...