ಕೀವ್: ದಾಳಿಯಿಂದ ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಗಡಿ ದಾಟಲು ನೆರವಾಗುತ್ತಿರುವ ದೇಶದ ತಿರಂಗಾ ಧ್ವಜವು ಈಗ ಪಾಕಿಸ್ತಾನ ಹಾಗೂ ಟರ್ಕಿ ವಿದ್ಯಾರ್ಥಿಗಳು ಸಹ ಸುರಕ್ಷಿತವಾಗಿ ಗಡಿ ದಾಟಲು ಅನುಕೂಲವಾಗುತ್ತಿದೆ. ಭಾರತದ ನೂರಾರು ವಿದ್ಯಾರ್ಥಿಗಳು ಉಕ್ರೇನ್ ಗಡಿ ದಾಟಿ ರೊಮೇನಿಯಾದ ಬುಚರೆಸ್ಟ್ ತಲುಪುತ್ತಿದ್ದಾರೆ. ಗಡಿಯಲ್ಲಿ ಸುರಕ್ಷಿತವಾಗಿ ರೊಮೇನಿಯಾ ಪ್ರವೇಶಿಸಲು ಭಾರತದ ಧ್ವಜವನ್ನು ಹಿಡಿದುಕೊಂಡು ತೆರಳುತ್ತಿದ್ದಾರೆ. ಆದರೆ, ಹೀಗೆ ಯಾವುದೇ ಧ್ವಜ ಇಲ್ಲದೆ ಗಡಿ ಪ್ರವೇಶಿಸುವುದು ಸಾಧ್ಯವಾಗದ ಕಾರಣ ಪಾಕಿಸ್ತಾನ ಹಾಗೂ ಟರ್ಕಿಯ ಕೆಲ ವಿದ್ಯಾರ್ಥಿಗಳು ಭಾರತದ ಧ್ವಜವನ್ನೇ ಹಿಡಿದು ಪ್ರವೇಶಿಸಿದ್ದಾರೆ. ಆ ಮೂಲಕ ಭಾರತದ ಧ್ವಜವು ನಮ್ಮ ದೇಶದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ವಿದೇಶಿ ವಿದ್ಯಾರ್ಥಿಗಳಿಗೂ ನೆರವಾಗುತ್ತಿದೆ. ಉಕ್ರೇನ್‌ನ ಒಡೆಸಾದಿಂದ ರೊಮೇನಿಯಾ ತಲುಪಿದ ಪಾಕಿಸ್ತಾನಿ ವಿದ್ಯಾರ್ಥಿಯೊಬ್ಬ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ತಿರಂಗಾ ಪ್ರಾಮುಖ್ಯದ ಕುರಿತು ತಿಳಿಸಿದ್ದಾನೆ. ''ಉಕ್ರೇನ್‌ನಿಂದ ರೊಮೇನಿಯಾ ತಲುಪಲು ಹಲವು ಕಿ.ಮೀ. ನಡೆಯಬೇಕು. ಈ ವೇಳೆ ಯಾವುದೇ ತೊಂದರೆಯಾಗಬಾರದು ಎಂದರೆ ಭಾರತದ ಧ್ವಜ ಹಿಡಿದು ಹೋಗಬೇಕು ಎಂದು ಹಲವರು ಸಲಹೆ ನೀಡಿದರು. ಅದರಂತೆ ನಾವು ತಿರಂಗಾ ಹಿಡಿದು ಬಂದೆವು. ಹಾಗಾಗಿ ಮಾರ್ಗ ಮಧ್ಯೆ ನಮಗೆ ಯಾವುದೇ ತೊಂದರೆ ಆಗಲಿಲ್ಲ,'' ಎಂದು ಮಾಹಿತಿ ನೀಡಿದ್ದಾನೆ. ಸುರಕ್ಷಿತವಾಗಿ ಭಾರತಕ್ಕೆ ವಾಪಸಾಗಲು ಭಾರತದ ವಿದ್ಯಾರ್ಥಿಗಳು ತಾವು ಪ್ರಯಾಣಿಸುವ ವಾಹನದ ಮೇಲೆ ತಿರಂಗಾ ಇರುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರು ಇದಕ್ಕೂ ಮೊದಲು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದರು. ಅದರಂತೆ ದೇಶದ ವಿದ್ಯಾರ್ಥಿಗಳು ವಾಹನಕ್ಕೆ ತಿರಂಗಾ ಕಟ್ಟಿ ಸುರಕ್ಷಿತವಾಗಿ ಉಕ್ರೇನ್ ಗಡಿ ರಾಷ್ಟ್ರಗಳಿಗೆ ತೆರಳಿದ್ದರು. ಪಾಕ್ ವಿದ್ಯಾರ್ಥಿಗಳಿಂದಲೇ ತ್ರಿವರ್ಣ ಧ್ವಜ ತಯಾರು ಉಕ್ರೇನ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ಸಿಗದ ಕಾರಣ ಪಾಕಿಸ್ತಾನ ಹಾಗೂ ಟರ್ಕಿ ವಿದ್ಯಾರ್ಥಿಗಳೇ ತಿರಂಗಾ ತಯಾರಿಸಿ, ರೊಮೇನಿಯಾ ಪ್ರವೇಶಿಸಿದ್ದಾರೆ. ಈ ಕುರಿತು ವಿದ್ಯಾರ್ಥಿಯೊಬ್ಬ ಮಾಹಿತಿ ನೀಡಿದ್ದು, ''ಬಿಳಿ ವಸ್ತ್ರಕ್ಕೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣ ಬಳಿದು ಧ್ವಜ ತಯಾರಿಸಿದ್ದೇವೆ. ಪೇಂಟ್ ಅಂಗಡಿಗೆ ತೆರಳಿ ಬಣ್ಣ ತಂದು ಪೇಂಟ್ ಸ್ಪ್ರೇಯರ್ ಬಳಸಿ ಧ್ವಜ ತಯಾರಿಸಿದ್ದೇವೆ,'' ಎಂದು ತಿಳಿಸಿದ್ದಾನೆ.
from India & World News in Kannada | VK Polls https://ift.tt/6orcFfR