
ಬೆಂಗಳೂರು: ನ್ಯಾಯಾಲಯದ ನಿರ್ಬಂಧ ಆದೇಶ ಉಲ್ಲಂಘಿಸಿ ಮಿಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯ ಸುರಿಯುತ್ತಿರುವ ಪ್ರಕರಣದ ಸಂಬಂಧ ಹೈಕೋರ್ಟ್ ಶನಿವಾರವೂ ಮುಖ್ಯ ಆಯುಕ್ತರೂ ಸೇರಿದಂತೆ ಅಧಿಕಾರಿಗಳ ವಿರುದ್ಧ ಮತ್ತೆ ಹರಿಹಾಯ್ದಿದೆ. ‘ಬಿಬಿಎಂಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ದಿನೇದಿನೆ ದೃಢವಾಗುತ್ತಿದೆ. ಇಲ್ಲಿರುವ ಅಧಿಕಾರಿಗಳು ಕಾನೂನಿಗಿಂತ ಮೇಲಿದ್ದೇವೆ ಎಂದು ಭಾವಿಸಿದಂತಿದೆ. ಇವರಿಗೆಲ್ಲಾ ಕಾನೂನು ಎಂದರೆ ಏನು ಎಂಬುದನ್ನು ಅರ್ಥ ಮಾಡಿಸುವ ಸಮಯ ಹತ್ತಿರ ಬಂದಿದೆ, ಅವರನ್ನೆಲ್ಲ ಒಮ್ಮೆ ಕಾರಾಗೃಹಕ್ಕೆ ಕಳಿಸಿದರೆ ಅವರಿಗೆ ನ್ಯಾಯಾಲಯವೆಂದರೆ ಏನೆಂದು ಅರ್ಥವಾಗುತ್ತದೆ’ ಎಂದು ಹೈಕೋರ್ಟ್ ಕಿಡಿ ಕಾರಿದೆ. ಬಿಬಿಎಂಪಿ ನಗರದಲ್ಲಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ 2012ರಲ್ಲಿ ಸಲ್ಲಿಸಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಕಳೆದ ಫೆ.15ರಂದು ನ್ಯಾಯಪೀಠ, ಬಿಬಿಎಂಪಿ ಆಯುಕ್ತರು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತಲ್ಲದೆ, ಮಾ.5ರಂದು ಆಯುಕ್ತರು ಖುದ್ದು ಹಾಜರಾಗಿ ವಿವರಣೆ ನೀಡಬೇಕೆಂದು ತಾಕೀತು ಮಾಡಿತ್ತು. ನ್ಯಾಯಾಲಯದ ನಿರ್ದೇಶನದಂತೆ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ವಿಚಾರಣೆಗೆ ಹಾಜರಾಗಿದ್ದರು. ಆಗ ನ್ಯಾಯಪೀಠ, ‘ನ್ಯಾಯಾಲಯದ ಆದೇಶವಿದ್ದರೂ ಏಕೆ ಉಲ್ಲಂಘನೆ ಮಾಡಿ ಕ್ವಾರಿಯಲ್ಲಿ ಕಸ ಸುರಿಯಲಾಗುತ್ತಿದೆ’ ಎಂದು ಖಾರವಾಗಿ ಪ್ರಶ್ನಿಸಿತು. ಪದೇ ಪದೆ ಕರುಣೆ ತೋರಲು ಇದು ಅರ್ಹ ಪ್ರಕರಣವಲ್ಲ‘ಕಾನೂನು ಎಂದರೇನೆಂದು ಆಯುಕ್ತರಿಗೆ ನಾವೇ ಮನವರಿಕೆ ಮಾಡಿಸುತ್ತೇವೆ. ಬಿಬಿಎಂಪಿ ಆಯುಕ್ತರ ನಡೆ ಗಮನಿಸುತ್ತಿದ್ದೇವೆ. ಪ್ರತಿದಿನ ಬಿಬಿಎಂಪಿಯದ್ದೇ ಸಮಸ್ಯೆ. ಈ ಬಿಬಿಎಂಪಿಯಿಂದ ಸಾಕಾಗಿ ಹೋಗಿದೆ. ಬಿಬಿಎಂಪಿಯವರು ಕಾನೂನಿಗಿಂತ ದೊಡ್ಡವರೆಂದು ಭಾವಿಸಿದಂತಿದೆ. ಈ ಅಧಿಕಾರಿಗಳಿಗೆ ಸೂಕ್ತ ಸಂದೇಶ ರವಾನಿಸಬೇಕಿದೆ. ಪದೇ ಪದೆ ಕರುಣೆ ತೋರಲು ಇದು ಅರ್ಹ ಪ್ರಕರಣವಲ್ಲ. ಇವರನ್ನು ಯಾವುದೇ ಕಾನೂನು ರಕ್ಷಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು. ನೋಡಿ ನೋಡಿ ಸಾಕಾಗಿ ಹೋಗಿದೆ‘ಇಲ್ಲಿಗೆ ಬಂದಾಗಿನಿಂದಲೂ ನಾನೂ ನೋಡುತ್ತಲೇ ಇದ್ದೇನೆ. ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸುವ ಹಾಗೂ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳನ್ನು ಬೆಳೆಸಿಕೊಂಡು ಹೋಗುತ್ತಿರುವ ಬಿಬಿಎಂಪಿಯನ್ನು ನೋಡಿ ನೋಡಿ ಸಾಕಾಗಿ ಹೋಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ತೀವ್ರ ಅಸಮಾಧಾನ ಹೊರಹಾಕಿದರು. ‘ಕೆಲವು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಈಗ ಸಮಯ ಬಂದಿದೆ. ಅವರಿಗೆ ತಪ್ಪು-ಸರಿಯ ಅನುಭವವಾಗುವಂತೆ ಮಾಡಬೇಕಿದೆ. ಆದರೆ, ಹೈಕೋರ್ಟ್ ಆದೇಶಗಳನ್ನು ಆಗಿಂದಾಗ್ಗೆ ಉಲ್ಲಂಘಿಸುತ್ತಲೇ ದುರ್ನಡತೆ ತೋರುತ್ತಿದ್ದಾರೆ. ಇದನ್ನು ಸಹಿಸಲಾಗದು’ ಎಂದು ನ್ಯಾಯಪೀಠ ಕಿಡಿಕಾರಿತು. ಆಯುಕ್ತರ ಕ್ಷಮೆಯಾಚನೆಈ ಹಿನ್ನೆಲೆಯಲ್ಲಿ ಮುಖ್ಯ ಆಯುಕ್ತ ಗೌರವ್ ಗುಪ್ತ ಬೇಷರತ್ ಕ್ಷಮೆಯಾಚಿಸಿದರು. ಇನ್ನು ಮುಂದೆ ಪಾಲಿಕೆಯಿಂದ ತಪ್ಪುಗಳಾಗುವುದಿಲ್ಲ, ಎಂದು ಅಭಯ ನೀಡಿದರು. ಆಗ ಪಾಲಿಕೆ ಪರ ವಾದಿಸಿದ ಹಿರಿಯ ನ್ಯಾಯವಾದಿ ಉದಯ್ ಹೊಳ್ಳ, ‘ಈಗ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದೆ. ಹಾಗಾಗಿ, ಇದೊಂದು ಬಾರಿ ಕರುಣೆ ತೋರಿ ಎಂದು ಮನವಿ ಮಾಡಿ, ಮಹಾಭಾರತದ ಶಿಶುಪಾಲ-ಕೃಷ್ಣನ ದೃಷ್ಟಾಂತ ಸನ್ನಿವೇಶವನ್ನು ಉಲ್ಲೇಖಿಸಿದರು. ‘ಶಿಶುಪಾಲ ನೂರು ತಪ್ಪುಗಳನ್ನು ಮಾಡಿದ್ದರೂ ಕೃಷ್ಣ , ಶಿಶುಪಾಲನನ್ನು ಕ್ಷಮಿಸಿದ್ದ. ನಾವು ನಿಮ್ಮನ್ನು ಕೃಷ್ಣ ಎಂದು ನಂಬಿ ಬಂದಿದ್ದೇವೆ’ ಎಂದರು. ಆಗ ಸಿಜೆ, ಶಿಶುಪಾಲನ ಸ್ಥಾನದಲ್ಲಿ ಬಿಬಿಎಂಪಿಯನ್ನಿಟ್ಟು ತೂಗಿದರು. ಕೊನೆಗೆ ಮನವಿಗೆ ಒಪ್ಪಿದ ನ್ಯಾಯಪೀಠ, ‘ಬಿಬಿಎಂಪಿ ಮುಖ್ಯ ಆಯುಕ್ತರು ತಮ್ಮ ನಡವಳಿಕೆಗೆ ಕಾರಣ ವಿವರಿಸಿ ಪ್ರಮಾಣಪತ್ರ ಸಲ್ಲಿಸಬೇಕು’ ಎಂದು ಸೂಚನೆ ನೀಡಿ ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಿತು.
from India & World News in Kannada | VK Polls https://ift.tt/pUhEyaM