
ಹೊಸದಿಲ್ಲಿ: ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುವ ಬೆಂಗಳೂರಿಗೆ ಸೆಡ್ಡು ಹೊಡೆಯಲು ತೆಲಂಗಾಣ ಪ್ರಯತ್ನಿಸುತ್ತಿದೆ. ಈ ಹಿಂದೆ ಬೆಂಗಳೂರಿನಿಂದ ಹಲವು ಕಂಪನಿಗಳನ್ನು ಹೈದರಾಬಾದ್‌ಗೆ ಸೆಳೆದಿದ್ದ ತೆಲಂಗಾಣದಲ್ಲಿ ಇದೀಗ ಮೈಕ್ರೋಸಾಫ್ಟ್‌ನ ಅತೀ ದೊಡ್ಡ ಸ್ಥಾಪನೆಯಾಗಲಿದೆ ಎಂದು ಗೊತ್ತಾಗಿದೆ. ತನ್ನ ಅತೀ ದೊಡ್ಡ ಡೇಟಾ ಸೆಂಟರ್ ಸ್ಥಾಪನೆಗಾಗಿ ಹೈದರಾಬಾದ್‌ನಲ್ಲಿ 275 ಕೋಟಿ ರೂ. ವೆಚ್ಚದಲ್ಲಿ ಮೂರು ಜಮೀನುಗಳನ್ನು ಖರೀದಿ ಮಾಡಿದೆ ಎಂದು ಈ ಬಗ್ಗೆ ಮಾಹಿತಿ ಇರುವವರಿಂದ ತಿಳಿದು ಬಂದಿದೆ. ಹೈದರಾಬಾದ್‌ನ ಮೇಕೆಗುಂಡ ಎಂಬಲ್ಲಿ 40 ಕೋಟಿ ಮೌಲ್ಯದಲ್ಲಿ 20 ಎಕರೆ ಸ್ಥಳ, ಶಾದ್‌ನಗರ್ ಎಂಬಲ್ಲಿ 164 ಕೋಟಿ ರೂ. ವೆಚ್ಚದಲ್ಲಿ 41 ಎಕರೆ ಸ್ಥಳ ಹಾಗೂ ಚಂದೆನ್‌ವೆಲ್ಲಿ ಎಂಬಲ್ಲಿ 71 ಕೋಟಿ ರೂ. ವೆಚ್ಚದಲ್ಲಿ 52 ಎಕರೆ ಸ್ಥಳವನ್ನು ಮೈಕ್ರೋಸಾಫ್ಟ್ ಖರೀದಿ ಮಾಡಿದೆ ಎಂದು ಗೊತ್ತಾಗಿದೆ. ಈಗಾಗಲೇ ಪುಣೆ, ಮುಂಬೈ ಹಾಗೂ ಚೆನ್ನೈನಲ್ಲಿ ಮೈಕ್ರೋಸಾಫ್ಟ್‌ನ ಡೇಟಾ ಸೆಂಟರ್ ಕಳೆದ ಐದಕ್ಕೂ ಅಧಿಕ ವರ್ಷಗಳ ಕಾಲ ಕಾರ್ಯ ನಿರ್ವಹಿಸುತ್ತಾ ಇದ್ದು, ಹೈದರಾಬಾದ್‌ನಲ್ಲಿ ಸ್ಥಾಪನೆಯಾಗುತ್ತಿರುವುದು ಮೈಕ್ರೋಸಾಫ್ಟ್‌ನ ಭಾರತದಲ್ಲಿನ ನಾಲ್ಕನೇ ಹಾಗೂ ಭಾರತದ ಅತೀ ದೊಡ್ಡ ಡೇಟಾ ಸೆಂಟರ್ ಆಗಿರಲಿದೆ. ಸೋಮವಾರವಷ್ಟೇ ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಚಂದೆನ್‌ವೆಲ್ಲಿಯಲ್ಲಿ 52 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ತನ್ನ ಅತೀ ದೊಡ್ಡ ಡೇಟಾ ಸೆಂಟರ್ ಸ್ಥಾಪನೆ ಮಾಡುವುದಾಗಿ ಮೈಕ್ರೋಸಾಫ್ಟ್ ಘೋಷಣೆ ಮಾಡಿತ್ತು. ಇದೀಗ ಮೂರು ಸ್ಥಳಗಳಲ್ಲಿ ಜಮೀನು ಖರೀದಿ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ. ಅಂತಾರಾಷ್ಟ್ರೀಯ ರಿಯಲ್ ಎಸ್ಟೇಟ್ ಸಂಸ್ಥೆ ಕುಷ್ಮನ್ & ವಾಕೇಫೀಲ್ಡ್ ಜಮೀನು ಖರೀದಿಯ ಒಪ್ಪಂದ ಕುದುರಿಸಿದೆ. ಮೈಕ್ರೋಸಾಫ್ಟ್‌ನ ಡೇಟಾ ಸೆಂಟರ್ ಸ್ಥಾಪನೆಗೆ, ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ವಿವಿಧ ವಿನಾಯಿತಿ ಹಾಗೂ ಉತ್ತೇಜನ ನೀಡುವುದಾಗಿ ಘೋಷಣೆ ಮಾಡಿದ್ದವು. ಆದರೆ ಕೊನೆಗೆ ಹೈದರಾಬಾದ್‌ನಲ್ಲಿ ಡೇಟಾ ಸೆಂಟರ್ ನಿರ್ಮಾಣ ಮಾಡಲು ಮೈಕ್ರೋಸಾಫ್ಟ್ ತೀರ್ಮಾನ ಮಾಡಿದೆ. ಹೈದರಾಬಾದ್‌ನಲ್ಲಿ ನಿರ್ಮಾಣವಾಗಲಿರುವ ಹೊಸ ಡೇಟಾ ಸೆಂಟರ್‌ನಲ್ಲಿ ಕಂಪನಿಗಳಿಗೆ, ಸ್ಟಾರ್ಟಪ್‌ಗಳಿಗೆ, ಶೈಕ್ಷಣಿಕ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಅತ್ಯಾಧುನಿಕ ಡೇಟಾ ಭದ್ರತೆ ಹಾಗೂ ಕ್ಲೌಡ್ ಪರಿಹಾರಗಳನ್ನು ಒದಗಿಸುವ ಸೇವೆ ಒದಗಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮೈಕ್ರೋಸಾಫ್ಟ್ ಹೇಳಿದೆ. ಹೈದರಾಬಾದ್‌ನಲ್ಲ ನಿರ್ಮಾಣವಾಗಲಿರುವ ಪ್ರಾದೇಶಿಕ ಡೇಟಾ ಸೆಂಟರ್‌ನಿಂದಾಗಿ, ಗ್ರಾಹಕರು ಮೈಕ್ರೋಸಾಫ್ಟ್ ಅಝ್ಯೂರ್ ಸೇರಿದಂದತೆ ಮೈಕ್ರೋಸಾಫ್ಟ್‌ನ ಕ್ಲೌಡ್‌ಗೆ ಅಂತಾರಾಷ್ಟ್ರೀಯ ಮಟ್ಟದ ದತ್ತಾಂಶ ಭದ್ರತೆ, ಖಾಸಗೀತನ ಪಡೆದುಕೊಳ್ಳಬಹುದಾಗಿದೆ. ಹೊಸ ಡೇಟಾ ಸೆಂಟಟರ್ ನಿರ್ಮಾಣದಿಂದಾಗಿ ಸ್ಥಳೀಯ ಉದ್ದಿಮೆಗಳಿಗೆ ಸಹಾಯವಾಗುವುದಲ್ಲದೇ, ಸಾವಿರಾರು ಉದ್ಯೋಗಗಳೂ ಸೃಷ್ಠಿಯಾಗಲಿದೆ. ದೇಶದ ಸಿಲಿಕಾನ್ ವ್ಯಾಲಿ ಎಂದು ಕರೆದುಕೊಳ್ಳುವ ಬೆಂಗಳೂರಿಗೆ ಈಗ ಸೆಡ್ಡು ಹೊಡೆಯುತ್ತಿದ್ದು, ಐಟಿ ಬಿಟಿ ವಲಯದಲ್ಲಿ ಹೈದರಾಬಾದ್ ವೇಗದ ಪ್ರಗತಿ ಕಾಣುತ್ತಿದೆ. ವಾರ್ಷಿಕ ಐಟಿ ಉತ್ಪನ್ನಗಳ ಮಾರಾಟದಲ್ಲೂ ಹೈದರಾಬಾದ್ ಗಣನೀಯ ಪ್ರಗತಿ ಕಾಣುತ್ತಿದ್ದು, 2020-21ರ ಹಣಕಾಸು ವರ್ಷದಲ್ಲಿ 1.45 ಟ್ರಿಲಿಯನ್ ರೂಪಾಯಿ ಮೌಲ್ಯದ ಸಾಫ್ಟ್‌ವೇರ್‌ಗಳನ್ನು ರಫ್ತು ಮಾಡಿದೆ. ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.
from India & World News in Kannada | VK Polls https://ift.tt/7Vw3mko