ಫಲಿತಾಂಶಕ್ಕೆ ಮುನ್ನವೇ ಸರಕಾರ ರಚನೆಗೆ ರಣತಂತ್ರ ಹೂಡಿರುವ ಕಾಂಗ್ರೆಸ್‌, ಬಿಜೆಪಿ

ಗೋವಾ ಕಲಿಸಿದ ಪಾಠದಿಂದ ಎಚ್ಚೆತ್ತ ಅಪರೂಪದ ಚುರುಕಿನ ನಡೆ ಪ್ರದರ್ಶಿಸಿದ ಪಕ್ಷ ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಸೋಮವಾರ ಏಳನೇ ಹಾಗೂ ಕೊನೆಯ ಹಂತದ ಮತದಾನ ನಡೆಯುವುದರೊಂದಿಗೆ ಪಂಚ ರಾಜ್ಯ ಚುನಾವಣೆ ಕ್ಲೈಮಾಕ್ಸ್‌ ಹಂತ ತಲುಪಿದೆ. ಫಲಿತಾಂಶಕ್ಕೆ ಮೂರು ದಿನ ಬಾಕಿ ಇರುವಾಗಲೇ ಕಾಂಗ್ರೆಸ್‌, ಎರಡೂ 'ಮುಂದಿನ ತಂತ್ರಗಾರಿಕೆ' ರೂಪಿಸುವ ಕಸರತ್ತಿನಲ್ಲಿ ತೊಡಗಿವೆ. ಈ ಸಲ ಫಲಿತಾಂಶಕ್ಕೆ ಮುನ್ನವೇ ಕಾಂಗ್ರೆಸ್‌ ಸಕ್ರಿಯವಾಗಿರುವುದು ವಿಶೇಷ. ಅದಕ್ಕೆ 2017ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಲಿತ ಪಾಠ ಕಾರಣ. ಕಳೆದ ಬಾರಿ ಕರಾವಳಿ ರಾಜ್ಯದ 40 ಕ್ಷೇತ್ರಗಳ ಪೈಕಿ 17 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಿಜೆಪಿಯ ಚುರುಕಿನ ನಡೆಯಿಂದಾಗಿ ಅಧಿಕಾರ ಕೈ ತಪ್ಪಿತ್ತು. ಅಂದು ಪಕ್ಷದ ಉಸ್ತುವಾರಿಯಾಗಿದ್ದ ದಿಗ್ವಿಜಯ್‌ ಸಿಂಗ್‌ ತೋರಿಸಿದ 'ನಿರ್ಲಕ್ಷ್ಯ'ದ ಸಂಪೂರ್ಣ ಪ್ರಯೋಜನ ಪಡೆದ ಬಿಜೆಪಿಯು ಸಣ್ಣಪುಟ್ಟ ಪಕ್ಷಗಳು ಹಾಗೂ ಪಕ್ಷೇತರ ಶಾಸಕರ ನೆರವಿನೊಂದಿಗೆ ಸರಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು. ಈ ಭಾರಿ ಅಂತಹ ಯಾವುದೇ ತಪ್ಪು ನಡೆಯಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್‌ ಕಾರ್ಯಪ್ರವೃತ್ತವಾಗಿದೆ. ಗೋವಾ, ಮಣಿಪುರ, ಉತ್ತರಾಖಂಡ, ಪಂಜಾಬ್‌ ಪೈಕಿ ಕನಿಷ್ಠ ಎರಡರಲ್ಲಿಗೆಲುವು ಸಾಧಿಸುವ ವಿಶ್ವಾಸವನ್ನು ಕಾಂಗ್ರೆಸ್‌ ಹೊಂದಿದೆ. ಆದರೆ, ಗೋವಾ ಮತ್ತು ಉತ್ತರಾಖಂಡ ಕುರಿತು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ನಾಯಕರಿಗೆ ಸ್ವಾತಂತ್ರ್ಯ: ಉತ್ತರಾಖಂಡ, ಪಂಜಾಬ್‌, ಗೋವಾ ಮತ್ತು ಮಣಿಪುರಗಳಿಗೆ ಕಾಂಗ್ರೆಸ್‌ ನಾಯಕರನ್ನು ಕಳುಹಿಸಿಕೊಟ್ಟಿದೆ. ಫಲಿತಾಂಶದ ಟ್ರೆಂಡ್‌ ಗಮನಿಸಿ, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಪಕ್ಷವು ಆ ನಾಯಕರಿಗೆ ನೀಡಿದೆ. ಬೇರೆ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವ ಅಥವಾ ಬೆಂಬಲ ನೀಡುವ ಸ್ವಾತಂತ್ರ್ಯವನ್ನೂ ನೀಡಲಾಗಿದೆ. ಪಕ್ಷದ ಮುಖಂಡ ರಾಹುಲ್‌ ಗಾಂಧಿ ಅವರು ಹಿರಿಯ ನಾಯಕರ ಜತೆ ಸಮಾಲೋಚನೆ ನಡೆಸಿದ್ದು, ಫಲಿತಾಂಶದ ಸಾಧ್ಯಾಸಾಧ್ಯತೆಗಳು ಮತ್ತು ಯಾವುದೇ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದಲ್ಲಿ ಪಕ್ಷ ಅನುಸರಿಸಬೇಕಾದ ಕ್ರಮಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ. ರಾಜಸ್ಥಾನಕ್ಕೆ ಪ್ರಿಯಾಂಕಾ: ಪ್ರಿಯಾಂಕಾ ವಾದ್ರಾ ಅವರು ಸೋಮವಾರ ರಾಜಸ್ಥಾನಕ್ಕೆ ದಿಢೀರ್‌ ಭೇಟಿ ನೀಡಿದ್ದಾರೆ. ತಮ್ಮ ಕುಟುಂಬಕ್ಕೆ ಆಪ್ತರಾಗಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ಜತೆ ಫಲಿತಾಂಶದ ಕುರಿತು ಚರ್ಚಿಸುವುದೇ ಈ ಭೇಟಿಯ ಉದ್ದೇಶ ಎನ್ನಲಾಗಿದೆ. ''ಪಕ್ಷಾಂತರವನ್ನು ತಡೆಯಲು ಐದೂ ರಾಜ್ಯಗಳ ಕಾಂಗ್ರೆಸ್‌ ಶಾಸಕರನ್ನು ರಾಜಸ್ಥಾನಕ್ಕೆ ರವಾನಿಸುವುದು ಕಾಂಗ್ರೆಸ್‌ ಯೋಜನೆ. ಆ ಕುರಿತ ರೂಪುರೇಷೆ ನಿರ್ಧರಿಸುವುದಕ್ಕಾಗಿಯೇ ಪ್ರಿಯಾಂಕಾ ರಾಜಸ್ಥಾನಕ್ಕೆ ತೆರಳಿದ್ದಾರೆ,'' ಎಂದು ಪಕ್ಷದ ಮೂಲಗಳು ತಿಳಿಸಿವೆ. ಗೋವಾದಲ್ಲಿ ಕೈ ಪಡೆ ಸಜ್ಜು ''ಗೋವಾದಲ್ಲಿ 2017ರ ಪರಿಸ್ಥಿತಿ ಮರುಕಳಿಸಲು ಬಿಡುವುದಿಲ್ಲ,'' ಎಂದು ಕಾಂಗ್ರೆಸ್‌ನಲ್ಲಿ ಗೋವಾ ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ''ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದರೆ ಯಾವುದೇ ಪಕ್ಷದ ಜತೆ ಹೊಂದಾಣಿಕೆಗೆ ನಾವು ಸಿದ್ಧ. ಆಮ್‌ ಆದ್ಮಿ ಪಾರ್ಟಿ ಮತ್ತು ತೃಣಮೂಲ ಕಾಂಗ್ರೆಸ್‌ ಜತೆಗೂ ಚುನಾವಣೋತ್ತರ ಮೈತ್ರಿಗೆ ಯಾರಾಗಿದ್ದೇವೆ,'' ಎಂದು ದಿನೇಶ್‌ ತಿಳಿಸಿದ್ದಾರೆ. ಗೋವಾದಲ್ಲಿ ಆಮ್‌ ಆದ್ಮಿ ಪಾರ್ಟಿ ಯಾವುದೇ ಪಕ್ಷದ ಜತೆ ಚುನಾವಣೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಇದೇ ಮೊದಲ ಬಾರಿ ರಾಜ್ಯದಲ್ಲಿ ಅದೃಷ್ಟ ಪರೀಕ್ಷೆ ಇಳಿದಿರುವ ತೃಣಮೂಲ ಕಾಂಗ್ರೆಸ್‌ ಮಾತ್ರ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ಜತೆ ಸ್ಥಾನ ಹೊಂದಾಣಿಕೆ ಮಾಡಿಕೊಂಡಿದೆ. ದಿನೇಶ್‌ ಗುಂಡೂರಾವ್‌ ಮತ್ತು ಗೋವಾ ಚುನಾವಣಾ ವೀಕ್ಷಕ ಪಿ.ಚಿದಂಬರಂ ಈಗಾಗಲೇ ಗೋವಾದಲ್ಲಿ ಬೀಡು ಬಿಟ್ಟಿದ್ದು, ಎಲ್ಲ ಅಭ್ಯರ್ಥಿಗಳ ಜತೆ ವೈಯಕ್ತಿಕ ಮಾತುಕತೆಯಲ್ಲಿ ತೊಡಗಿದ್ದಾರೆ. ಗೆದ್ದ ಬಳಿಕ ಪಕ್ಷಾಂತರ ಮಾಡುವುದಿಲ್ಲಎಂದು ಕಾಂಗ್ರೆಸ್‌ ಗೋವಾ ಮತ್ತು ಪಂಜಾಬ್‌ಗಳಲ್ಲಿ ಅಭ್ಯರ್ಥಿಗಳಿಂದ ಪ್ರಮಾಣಪತ್ರಕ್ಕೆ ಸಹಿ ಹಾಕಿಸಿಕೊಂಡಿದೆಯಲ್ಲದೆ, ಮಂದಿರ-ಮಸೀದಿ-ಚರ್ಚ್ಗಳಿಗೆ ಕರೆದೊಯ್ದು ಆಣೆ ಪ್ರಮಾಣವನ್ನೂ ಮಾಡಿಸಿಕೊಂಡಿದೆ. ಕಳೆದ ಸಲ ಗೆದ್ದಿದ್ದ 17 ಶಾಸಕರ ಪೈಕಿ 15 ಶಾಸಕರು ಬಿಜೆಪಿ, ಟಿಎಂಸಿಗೆ ಪಕ್ಷಾಂತರ ಮಾಡಿದ್ದಾರೆ. ಬಿಜೆಪಿಗೆ ಉತ್ತರಾಖಂಡ ಆತಂಕ ಉತ್ತರಾಖಂಡದಲ್ಲಿ ಅಧಿಕಾರ ಉಳಿಸಿಕೊಳ್ಳುವ ಕುರಿತು ಬಿಜೆಪಿಗೆ ಆತಂಕ ಶುರುವಾಗಿದೆ. ಹೀಗಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಅವರು ರಾಜ್ಯಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ''ವೈಯಕ್ತಿಕ ಕಾರಣಗಳಿಗಾಗಿ ಉತ್ತರಾಖಂಡಕ್ಕೆ ಭೇಟಿ ನೀಡಿದ್ದೇನೆ,'' ಎಂದು ಸುದ್ದಿಗಾರರಿಗೆ ತಿಳಿಸಿದ್ದ ವಿಜಯವರ್ಗೀಯ, ನಂತರ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಸೇರಿದಂತೆ ಪಕ್ಷದ ರಾಜ್ಯ ಮುಖಂಡರು ಹಾಗೂ ಅಭ್ಯರ್ಥಿಗಳ ಸಭೆ ನಡೆಸಿದ್ದಾರೆ. ರಾಜ್ಯದ 70 ವಿಧಾನಸಭೆ ಕ್ಷೇತ್ರಗಳ ಪೈಕಿ 61 ಕಡೆ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ, ಉಳಿದ 9 ಕ್ಷೇತ್ರಗಳಲ್ಲಿ ಪಕ್ಷೇತರರು ಹಾಗೂ ಸಣ್ಣಪುಟ್ಟ ಪಕ್ಷಗಳು ನೇರ ಸ್ಪರ್ಧೆಯೊಡ್ಡಿದ್ದಾರೆ ಎಂಬ ಆಂತರಿಕ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಬಿಜೆಪಿಯು 'ಪ್ಲ್ಯಾನ್‌-ಬಿ' ಸಿದ್ಧತೆ ಆರಂಭಿಸಿದೆ. ಇನ್ನೊಂದೆಡೆ ಕಾಂಗ್ರೆಸ್‌ ಸಹ ತನ್ನ ಅಭ್ಯರ್ಥಿಗಳ ಚಲನವಲನದ ಮೇಲೆ ಕಣ್ಣಿಟ್ಟಿದೆ.


from India & World News in Kannada | VK Polls https://ift.tt/DGmHAx0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...