ಸರ್ಜಿಕಲ್ ದಾಳಿಯಿಂದ ಆರ್ಟಿಕಲ್ 370 ವರೆಗೆ: ಪಾಕ್‌ಗೆ ಎಲ್ಲೆಡೆಯಿಂದ ಮೋದಿ ಸರಕಾರದ ಕುಣಿಕೆ

ಹೊಸದಿಲ್ಲಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪಾಕಿಸ್ತಾನದ ಕಡೆಗಿನ ಭಾರತದ ನಡವಳಿಕೆ ಸಂಪೂರ್ಣ ಬದಲಾಗಿದೆ. ನೇರ ಯುದ್ಧವನ್ನು ಗೆಲ್ಲಲಾಗದೆ ಭಯೋತ್ಪಾದನೆ ಭಾರತವನ್ನು ಅಸ್ಥಿರಗೊಳಿಸುವ ಪಾಕ್‌ ಹವಣಿಕೆಯನ್ನು ಬಲಿಷ್ಠ ಕೈಗಳಿಂದ ಹತ್ತಿಕ್ಕುವ ದೃಢ ನಿರ್ಧಾರಕ್ಕೆ ಬಂದಿದೆ. ಜತೆಜತೆಗೇ, ಸರ್ಜಿಕಲ್‌ ದಾಳಿಯಿಂದ ತೊಡಗಿ ಕಾಶ್ಮೀರದ 370ನೇ ವಿಧಿ ರದ್ದತಿ ವರೆಗೆ ಪಾಕ್ ಜತೆಗಿನ ಬಾಂಧವ್ಯವನ್ನು ಪುನಾರಚಿಸುವ ದಿಟ್ಟತನವನ್ನು ಪ್ರದರ್ಶಿಸಿದೆ. 2001ರಲ್ಲಿ ಸಂಸತ್ತಿನ ಮೇಲೆ ಪಾಕ್ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ದೇಶಕ್ಕೆ ಎದುರಾಗಿರುವ ಅಪಾಯದ ಬೆದರಿಕೆಯ ಪ್ರಮಾಣವನ್ನು ಮರು ನಿರೂಪಿಸಲಾಯಿತು. ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ದಾಳಿಗಳ ಜತೆಗೆ ಮಿಲಿಟರಿ ಮೂಲಕ ದಂಡನಾ ಕ್ರಮಗಳನ್ನೂ ಅನುಸರಿಸಲಾಗುತ್ತಿದೆ. ಈ ಮೂಲಕ ರಕ್ಷಣಾತ್ಮಕ ನಡೆಯಷ್ಟೇ ಅಲ್ಲ, ಅಗತ್ಯ ಬಿದ್ದರೆ ಆಕ್ರಮಣಕಾರಿಯಾಗಿಯೂ ವರ್ತಿಸಲು ಸಿದ್ಧ ಎಂದು ಭಾರತ ಸಾರಿದೆ. 2001-02ರಲ್ಲಿ ಉದ್ಭವಿಸಿದ ಮಿಲಿಟರಿ ಬಿಕ್ಕಟ್ಟು ಕೆಲವು ತಿಂಗಳುಗಳ ಕಾಲ ಮುಂದುವರಿದು, ಕದನ ವಿರಾಮ ಒಪ್ಪಂದದಲ್ಲಿ ಕೊನೆಗೊಂಡಿತು. ಬಳಿಕ, ಭಾರತದ ವಿರುದ್ಧ ಕಾರ್ಯಾಚರಣೆಗೆ ತನ್ನ ನೆಲವನ್ನು ಬಳಸಿಕೊಳ್ಳಲು ಉಗ್ರರಿಗೆ ಅವಕಾಶ ನೀಡುವುದಿಲ್ಲ ಎಂದು ಜಂಟಿ ಹೇಳಿಕೆಯಲ್ಲಿ ಪಾಕಿಸ್ತಾನ ವಾಗ್ದಾನ ಮಾಡಿತು, ಆದರೆ ನಂತರ ತನ್ನ ಎಂದಿನ ಚಾಳಿಯಂತೆ ಮಾತು ಮುರಿಯಿತು. ಆದರೂ ದೊಡ್ಡ ಪ್ರಮಾಣ ಸೇನೆ ಜಮಾವಣೆ ಪದೇ ಪದೇ ಮಾಡುವಂತಹ ಕಾರ್ಯವಲ್ಲ; ಅದಕ್ಕೆ ಭಾರೀ ವೆಚ್ಚವೂ ತಗಲುತ್ತದೆ. ಆದರೂ ಕುತಂತ್ರ ಬಿಡದ ಪಾಕಿಸ್ತಾನ ಅಣ್ವಸ್ತ್ರ ಸಜ್ಜಿತ ನೆರೆಯ ದೇಶಗಳ ನಡುವೆ ಮಾತುಕತೆ ಪುನರಾರಂಭಿಸುವಂತೆ ಭಾರತದ ಮೇಲೆ ಒತ್ತಡ ಹೇರಿ ಎಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮೊರೆಯಿಡುತ್ತಿದೆ. 26/11ರ ಮುಂಬಯಿ ದಾಳಿಗಳ ಬಳಿಕ ಶತ್ರು ದಮನಕ್ಕೆ ಭಾರತ ಬಲಪ್ರಯೋಗಕ್ಕೆ ಹಿಂಜರಿಯುವುದಿಲ್ಲ ಎಂದು ಭಾವನೆ ಪಾಕಿಸ್ತಾನದ ಪ್ರಮುಖ ವಲಯಗಳಿಗೆ ಮನದಟ್ಟಾಯಿತು. ಮಾತುಕತೆ ಬೇಡಿಕೆಯನ್ನು ತಿರಸ್ಕರಿಸುವುದರ ಜತೆಗೆ ಯುದ್ಧದ ಬೆದರಿಕೆಯನ್ನು ನಿಷ್ಕ್ರಿಯಗೊಳಿಸುವ ಭಾರತದ ಕಾರ್ಯತಂತ್ರದಿಂದ ಪಾಕ್‌ ಕಂಗೆಟ್ಟಿದೆ. 2016ರಲ್ಲಿ ಮೋದಿ ಸರಕಾರ ನಡೆಸಿದ ಬಳಿಕವಂತೂ ಪಾಕಿಸ್ತಾನ ನಡುಕ ಶುರುವಾಗಿದೆ. ಬಹಿರಂಗವಾಗಿ ಈ ಸರ್ಜಿಕಲ್ ದಾಳಿ ನಡೆದೇ ಇಲ್ಲ ಎಂದು ವಾದಿಸುತ್ತಿರುವ ಪಾಕಿಸ್ತಾನ ಆಂತರಿಕವಾಗಿ ಒಪ್ಪಿಕೊಳ್ಳದೆ ವಿಧಿಯಿಲ್ಲ ಎಂಬ ಸ್ಥಿತಿಗೆ ತಲುಪಿದೆ. ಭಾರತದೊಳಕ್ಕೆ ನುಗ್ಗಲು ಸಜ್ಜಾಗಿದ್ದ ಹಲವಾರು ಉಗ್ರರು ಭಾರತದ ಸರ್ಜಿಕಲ್ ದಾಳಿಗೆ ಬಲಿಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮತ್ತು ಪಾಕ್ ಮಿಲಿಟರಿ ಅಧಿಕಾರಿಗಳ ನಡುವಣ ಮಾತುಕತೆಯ ಆಡಿಯೋ ಬಹಿರಂಗವಾಗಿರುವುದು ನಿರಾಕರಿಸಲಾಗದ ಪುರಾವೆಯಾಗಿದೆ. 2019ರಲ್ಲಿ ಪುಲ್ವಾಮಾ ದಾಳಿ ಬಳಿಕ ಭಾರತ ಬಾಲಾಕೋಟ್ ಮೇಲೆ ವೈಮಾನಿಕ ದಾಳಿ ನಡೆಸಿ ಉಗ್ರರ ಶಿಬಿರವನ್ನು ಧ್ವಂಸಗೊಳಿಸಿತು. ಈಗಲೂ ಜೈಷೆ ಮೊಹಮ್ಮದ್ ಉಗ್ರರ ಶಿಬಿರ ನಾಶವಾಗಿದೆ ಎಂಬುದನ್ನು ಪಾಕ್ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲ. ಆದರೆ ದೀರ್ಘಕಾಲ ಭಾರತದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿರುವುದೇ ಭಾರತೀಯ ವಾಯುಪಡೆ ಮತ್ತೆ ದಾಳಿ ನಡೆಸಿದರೆ ಎಂಬ ಆತಂಕದ ಸಂಕೇತವಾಗಿದೆ. ಭಾರತೀಯ ರಕ್ಷಣಾ ನೀತಿಜ್ಞರು ನಿರ್ದಿಷ್ಟವಾಗಿ ಮತ್ತೊಂದು ದಾಳಿ ಬಗ್ಗೆ ಹೇಳದಿದ್ದರೂ, ಮೋದಿ ಸರಕಾರ ಯಾವುದೇ ಸಮಯ ಪೂರ್ವಭಾವಿಯಾಗಿ ದಂಡನಾತ್ಮಕ ದಾಳಿ ನಡೆಸಲು ಆದೇಶ ನೀಡಬಹುದು ಎಂಬ ಸಂಕೇತವನ್ನು ಜಗತ್ತಿನ ಮುಂದೆ ಸಾರಿ ಹೇಳಿದೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಥಾಮಸ್ ಶೆಲ್ಲಿಂಗ್ ಹೇಳುತ್ತಾರೆ. ಭಾರತವೀಗ ತನ್ನ ಹಿಂದಿನ ನಿಷ್ಕ್ರಿಯ ರಕ್ಷಣಾತ್ಮಕ ಧೋರಣೆ ಕೈಬಿಟ್ಟು ಕ್ರಿಯಾಶೀಲ ರಕ್ಷಣಾತ್ಮಕ ಧೋರಣೆ ಅನುಸರಿಸುತ್ತಿದೆ. ಇದರಿಂದಾಗಿ ಹಿಂದಿನ ಯಥಾಸ್ಥಿತಿ ಬದಲಾಗಿದೆ. ಪಶ್ಚಿಮ ಏಷ್ಯಾದಲ್ಲಿ ಸೌದಿ ಅರೇಬಿಯಾ ಮತ್ತು ಯುಎಇ ಜತೆಗೆ ಭಾರತ ಹೆಚ್ಚು ಹೆಚ್ಚು ನಿಕಟ ಬಾಂಧವ್ಯ ಬೆಳೆಸಿಕೊಳ್ಳುತ್ತಿದೆ. ಇದರಿಂದಾಗಿ ಜಮ್ಮು ಕಾಶ್ಮೀರದ ಬೆಳವಣಿಗೆಗಳ ವಿಚಾರದಲ್ಲಿ ಮುಸ್ಲಿಂ ರಾಷ್ಟ್ರಗಳು ತನ್ನ ಪರವಾಗಿ ನಿಲ್ಲುತ್ತಿಲ್ಲ ಎಂದು ಪಾಕ್‌ ಗೋಳಾಡುತ್ತಿದೆ. ಸಂವಿಧಾನದ 370ನೇ ವಿಧಿ ರದ್ದತಿ ಮೋದಿ ಸರಕಾರದ ಅತ್ಯಂತ ದಿಟ್ಟ ಹಾಗೂ ಅತ್ಯಂತ ಮಹತ್ವದ ಕ್ರಮವಾಗಿದೆ. ಇದನ್ನು ಪಾಕ್ ಕಡೆಗಣಿಸುವಂತೆಯೇ ಇಲ್ಲ. ಹಿಂದೊಮ್ಮೆ ಕಾಶ್ಮೀರ ತನ್ನದೇ ಎಂದು ಪ್ರತಿಪಾದಿಸುತ್ತಿದ್ದ ಪಾಕ್‌ ಈಗ ಈ ಬಗ್ಗೆ ಪ್ರತಿಕ್ರಿಯಿಸುವುದಕ್ಕೂ ಹಿಂದೆ ಮುಂದೆ ನೋಡುವಂತಾಗಿದೆ. ಇದು ಮೇಲ್ನೋಟಕ್ಕೇ ಎದ್ದು ಕಾಣುವ ಬದಲಾವಣೆಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ದಮನವಾಗುತ್ತಿದೆ ಎಂದು ದೂರುತ್ತ, ಜಗತ್ತಿನ ಗಮನ ಸೆಳೆಯಲು ಅಣ್ವಸ್ತ್ರ ಸಜ್ಜಿತ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಒಳ್ಳೆಯದಲ್ಲ ಎಂದು ಹೇಳುತ್ತಿದೆ. ಭಾರತ ಜವಾಬ್ದಾರಿಯುತ ರಾಷ್ಟ್ರವಾಗಿ ಈಗಲೂ 'ಅಣ್ವಸ್ತ್ರವನ್ನು ಮೊದಲು ಬಳಸದಿರುವ ನೀತಿ'ಯನ್ನು ಬದಲಿಸಿಲ್ಲ. ಆದರೆ ಸಂದರ್ಭ ಬಂದರೆ ಅದನ್ನು ಬದಲಿಸುವುದಕ್ಕೂ ಸಿದ್ಧ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಈಗಾಗಲೇ ಮೂರ್ನಾಲ್ಕು ಬಾರಿ ಘೋಷಿಸಿದ್ದಾರೆ. ಇದು ಪಾಕಿಸ್ತಾನಕ್ಕೆ ಮತ್ತಷ್ಟು ಆತಂಕ ತಂದಿದೆ. ಅಲ್ಲದೆ ಭಾರತ, ಒಪ್ಪಂದವನ್ನೂ ಮುರಿಯದೆ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ನಿಲ್ಲಿಸಿದೆ. ಪುಂಡ ರಾಷ್ಟ್ರಕ್ಕೆ ಪಾಠ ಕಲಿಸಲು ಭಾರತ ಎಲ್ಲ ಬಗೆಯ ದಂಡನಾ ಕ್ರಮಗಳನ್ನು ಅನುಸರಿಸಲಾರಂಭಿಸಿದೆ. ಇದು ಪಾಕಿಸ್ತಾನದ ಪಾಲಿಗೆ ಹೊಸ ಅನುಭವವಾಗಿದೆ.


from India & World News in Kannada | VK Polls https://ift.tt/2LlO3ST

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...