ಒಂದೇ ವೇದಿಕೆಯಲ್ಲಿಸಿದ್ದರಾಮಯ್ಯ- ಗುಬ್ಬಿ ಶಾಸಕ: ಶ್ರೀನಿವಾಸ್‌ 'ಕೈ' ಹಿಡಿಯಲು ವೇದಿಕೆ ಸಜ್ಜು?

ಶಶಿಧರ್‌ ಎಸ್‌.ದೋಣಿಹಕ್ಲು ತುಮಕೂರು: ಎಸ್‌.ಆರ್‌. ಶ್ರೀನಿವಾಸ್‌ 'ತೆನೆ' ಇಳಿಸಿ 'ಕೈ' ಹಿಡಿಯಲು ವೇದಿಕೆ ಸಜ್ಜಾಗುತ್ತಿದೆ. ಖಾಸಗಿ ಆಸ್ಪತ್ರೆ ಉದ್ಘಾಟನೆ ನೆಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಜೆಡಿಎಸ್‌ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಹೌದು, ನ.1ರಂದು ಗುಬ್ಬಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಚಾಲುಕ್ಯ ಆಸ್ಪತ್ರೆ ಲೋಕಾರ್ಪಣೆಗೊಳ್ಳುತ್ತಿದೆ. ಮೇಲ್ನೋಟಕ್ಕೆ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮವಾಗಿದ್ದರೂ ಸಿದ್ದರಾಮಯ್ಯ ಅವರಿಗೆ ಬೃಹತ್‌ ಬೈಕ್‌ ಜಾಥಾ, ಸೇಬು ಹಾರ ಹಾಕಿ ಭವ್ಯ ಸ್ವಾಗತಕ್ಕೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಜತೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸಿದ್ದರಾಮಯ್ಯ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳುವುದು ಖಚಿತ. ಜೆಡಿಎಸ್‌ ಸಮಾವೇಶಕ್ಕೆ ಸಡ್ಡು ಇತ್ತೀಚೆಗೆ ಬಿ.ಎಸ್‌. ನಾಗರಾಜು ಪಕ್ಷ ಸೇರ್ಪಡೆಗಾಗಿ ಗುಬ್ಬಿಯಲ್ಲಿ ಜೆಡಿಎಸ್‌ ಬೃಹತ್‌ ಸಮಾವೇಶ ನಡೆದಿತ್ತು. ಜೆಡಿಎಸ್‌ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಕಾರ್ಯಕ್ರಮದಿಂದ ದೂರವಿದ್ದು ಅಸಮಾಧಾನ ಹೊರಹಾಕಿದ್ದರು. ಸಮಾವೇಶದ ಬಳಿಕ ಕ್ಷೇತ್ರದಲ್ಲಿ ಪ್ರತ್ಯಕ್ಷರಾಗಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಗುಡುಗಿದ್ದರು. ಅಲ್ಲದೆ ಕಲ್ಲುಗುಡಿಯಲ್ಲಿ ನಡೆದಿದ್ದ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಅವರಿದ್ದ ವೇದಿಕೆಯಲ್ಲಿ ಬಹಿರಂಗವಾಗಿಯೇ ತಮಗೆ ಜೆಡಿಎಸ್‌ ಬಾಗಿಲು ಮುಚ್ಚಿದೆ ಎಂದಿದ್ದರು. ಜತೆಗೆ ಕೆಎನ್‌ಆರ್‌ ಜತೆ ಹೆಜ್ಜೆ ಹಾಕುವುದಾಗಿ ಹೇಳುವ ಮೂಲಕ ಕಾಂಗ್ರೆಸ್‌ ಸೇರ್ಪಡೆಯನ್ನು ಪರೋಕ್ಷವಾಗಿ ಖಚಿತ ಪಡಿಸಿದ್ದರು. ಈ ಎಲ್ಲಾಬೆಳವಣಿಗೆಗಳ ಬೆನ್ನಲ್ಲೇ ಖಾಸಗಿ ಆಸ್ಪತ್ರೆ ಲೋಕಾರ್ಪಣೆ ನೆಪದಲ್ಲಿ ಜೆಡಿಎಸ್‌ ಸಮಾವೇಶಕ್ಕೆ ಸಡ್ಡು ಹೊಡೆದು ಸಿದ್ದರಾಮಯ್ಯ ಭೇಟಿ ಕಾರ್ಯಕ್ರಮ ನಡೆಯುತ್ತಿದೆ. 'ಕೈ' ನಾಯಕರೊಂದಿಗೆ ಎಸ್‌ಆರ್‌ಎಸ್‌? ಸಿದ್ದರಾಮಯ್ಯ ಆಗಮನಕ್ಕಾಗಿ ಸಿದ್ಧತೆಯಲ್ಲಿರುವ ಜಿಲ್ಲಾಮಟ್ಟದ ನಾಯಕರೊಂದಿಗೆ ಎಸ್‌.ಆರ್‌. ಶ್ರೀನಿವಾಸ್‌ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಬಹಿರಂಗವಾಗಿಯೇ ಪಕ್ಷ ತೊರೆಯುವ ಸೂಚನೆ ನೀಡಿರುವ ಶ್ರೀನಿವಾಸ್‌ ಕಾಂಗ್ರೆಸ್‌ ಸೇರ್ಪಡೆ ನಿಟ್ಟಿನಲ್ಲಿ ತಯಾರಿ ನಡೆಸುತ್ತಿರುವುದು ಸುಸ್ಪಷ್ಟವಾಗಿದ್ದು, ಸಿದ್ದರಾಮಯ್ಯ ಬರುವಿಕೆ ಆ ನಿಟ್ಟಿನಲ್ಲಿ ಸಜ್ಜುಗೊಂಡಿರುವ ವೇದಿಕೆ ಎಂದು ಹೇಳಲಾಗುತ್ತಿದೆ. ಚಾಲುಕ್ಯ ಆಸ್ಪತ್ರೆ ಉದ್ಘಾಟನೆ ನಾಳೆಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲುಕ್ಯ ಆಸ್ಪತ್ರೆ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಅವರದ್ದು. ಶ್ರೀ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ, ತುಮಕೂರು ಕೈವಲ್ಯಜ್ಞಾನ ವೃಂದದ ಶ್ರೀ ಕೈವಲ್ಯಾನಂದ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸುವರು. ಯುವ ಮುಖಂಡ ಬಿಎಸ್ ನಾಗರಾಜು ಮತ್ತು ಇತರರ ಸೇರ್ಪಡೆ ಕಾರ್ಯಕ್ರಮ ಇತ್ತೀಚೆಗೆ ಗುಬ್ಬಿಯಲ್ಲಿ ನಡೆದಿತ್ತು. ಈ ಬೃಹತ್ ಸಮಾವೇಶದಲ್ಲಿ ಎಸ್‌ಆರ್ ಶ್ರೀನಿವಾಸ್ ಅವರ ಗೈರು ಚರ್ಚೆಗೆ ಕಾರಣವಾಗಿತ್ತು. ಅವರು ಸಮಾವೇಶ ಮುಗಿದ ಬಳಿಕ ಗುಬ್ಬಿಯಲ್ಲಿ ಕಾಣಿಸಿಕೊಂಡಿದ್ದರು. ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಪಕ್ಷ ಬದಲಾವಣೆಯ ಸೂಚನೆ ನೀಡಿದ್ದರು. ಆದರೆ ತುಮಕೂರು ಕಾಂಗ್ರೆಸ್‌ನಲ್ಲಿ ಶ್ರೀನಿವಾಸ್ ಅವರ ಸೇರ್ಪಡೆಗೆ ವಿರೋಧವೂ ಇದೆ. ಇದನ್ನು ನಾಯಕರು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಈಗಿರುವ ಕುತೂಹಲ.


from India & World News in Kannada | VK Polls https://ift.tt/2ZMv2o3

ಕಗ್ಗತ್ತಲಲ್ಲಿ ರಾಮನಗರದ 52 ಗ್ರಾಪಂಗಳು; ಶುಲ್ಕ ಪಾವತಿಸದ ಗ್ರಾಪಂಗಳಿಗೆ ವಿದ್ಯುತ್‌ ಕಡಿತದ ಎಚ್ಚರಿಕೆ!

ಆರ್‌.ಶ್ರೀಧರ್‌ ರಾಮನಗರ: ಜಿಲ್ಲೆಯ 52 ಗ್ರಾಮ ಪಂಚಾಯಿತಿಗಳು ಇನ್ನು ಕೆಲವೇ ದಿನಗಳಲ್ಲಿ ಕಗ್ಗತ್ತಲಲ್ಲಿ ಮುಳಗಲಿವೆ. ಈ ಗ್ರಾಪಂ ವ್ಯಾಪ್ತಿಗಳ ಗ್ರಾಮಗಳಲ್ಲಿ ಬೀದಿ ದೀಪಗಳು ಉರಿಯುವುದಿಲ್ಲ, ನೀರು ಪೂರೈಕೆ ಆಗುವುದಿಲ್ಲ. ಗ್ರಾಪಂ ಕಚೇರಿ, ಸರಕಾರಿ ಶಾಲೆಗಳಿಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳ್ಳಲಿದೆ. ಅಷ್ಟಕ್ಕೂ ಆಗಿರುವುದು ಏನು?ರಾಮನಗರ ಹಾಗೂ ಚನ್ನಪಟ್ಟಣ ತಾಲೂಕುಗಳ ಸುಮಾರು 52 ಗ್ರಾಮ ಪಂಚಾಯಿತಿಗಳು ಹಲವು ತಿಂಗಳಿಂದ ವಿದ್ಯುತ್‌ ಶುಲ್ಕ ಪಾವತಿಸಿಲ್ಲ. ವಿದ್ಯುತ್‌ ಶುಲ್ಕ ಪಾವತಿಸುವಂತೆ ಬೆಸ್ಕಾಂ ಪದೇಪದೇ ನೋಟಿಸ್‌ ನೀಡಿದರೂ, ಗ್ರಾಪಂಗಳು ಕ್ಯಾರೇ ಎಂದಿಲ್ಲ. ಲಕ್ಷಾಂತರ ರೂಪಾಯಿ ಬಿಲ್‌ ಬಾಕಿಯಿಂದ ಸಿಟ್ಟಿಗೆದ್ದಿರುವ ಬೆಸ್ಕಾಂ ಅಧಿಕಾರಿಗಳು, ಗ್ರಾಪಂಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಗ್ರಾಪಂಗಳ ಪಿಡಿಒಗಳಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ. ನಿಮ್ಮ ವ್ಯಾಪ್ತಿಯ ಬೀದಿದೀಪಗಳು, ಕುಡಿಯುವ ನೀರು ಪೂರೈಸುವ ಪಂಪ್‌ಸೆಟ್‌ ಘಟಕಗಳ ವಿದ್ಯುತ್‌ ಬಾಕಿಯನ್ನು ತಕ್ಷಣ ಪಾವತಿಸಬೇಕು. ತಪ್ಪಿದರೆ, ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಇದರಿಂದ ಜನರಿಗೆ ಆಗುವ ತೊಂದರೆಗೆ ನಾವು ಜವಾಬ್ದಾರರಲ್ಲ ಎಂದು ಬೆಸ್ಕಾಂ ನೋಟಿಸ್‌ನಲ್ಲಿ ತಿಳಿಸಿದೆ. 150 ಗ್ರಾಮಗಳಿಗೆ ತೊಂದರೆ ಒಂದು ವೇಳೆ, ಗ್ರಾಪಂಗಳು ಹಣ ಪಾವತಿಸುವುದನ್ನು ವಿಳಂಬಮಾಡಿದರೆ 52 ಗ್ರಾಪಂಗಳು ಸುಮಾರು ಅಂದಾಜು 150ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಬೀದಿ ದೀಪಗಳು ಆಫ್‌ ಆಗಲಿವೆ. ಇಡೀ ಗ್ರಾಮಗಳು ಕಗ್ಗತ್ತಲಿನಲ್ಲಿ ರಾತ್ರಿ ಕಳೆಯಬೇಕು. ಕುಡಿಯುವ ನೀರು ಪೂರೈಸಲು ಸಹ ವಿದ್ಯುತ್‌ ಇಲ್ಲದೇ ಪರದಾಡಬೇಕಿದೆ. ಗ್ರಾಪಂಗಳಲ್ಲಿ ಏನು ಸಮಸ್ಯೆ?ಪ್ರತಿ ಗ್ರಾಮಪಂಚಾಯಿತಿಯನ್ನು ಒಂದು ಘಟಕವೆಂದು ಪರಿಗಣಿಸುವ ಬೆಸ್ಕಾಂ, ತಿಂಗಳಿಗೆ ತಲಾ 5 ಲಕ್ಷ ರೂ.ಗಳಂತೆ ಬಿಲ್‌ ನಿಗದಿಪಡಿಸುತ್ತಿದೆ ಎಂಬ ಆರೋಪಗಳಿವೆ. ಕಳೆದೊಂದು ವರ್ಷದಿಂದ ಈ ಆರೋಪ ಸಂಬಂಧ ಬೆಸ್ಕಾಂ ಮತ್ತು ಗ್ರಾಪಂ ಅಧಿಕಾರಿಗಳ ಜತೆ ಹಲವು ಸಭೆಗಳನ್ನು ನಡೆಸಿದ್ದ ಜಿಪಂ ಸಿಇಒ, ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದರು. ತಿಂಗಳಿಗೆ 5 ಲಕ್ಷ ರೂ.ಗಳಷ್ಟು ವಿದ್ಯುತ್‌ ಬಳಸುವುದಿಲ್ಲ. ಬೆಸ್ಕಾಂ ಅವೈಜ್ಞಾನಿಕ ರೀತಿಯಲ್ಲಿ ದರ ನಿಗದಿಪಡಿಸುತ್ತಿದೆ ಎಂಬುದು ಗ್ರಾಪಂಗಳ ದೂರಾಗಿದೆ. ಹೀಗಾಗಿ ಅವರು ಬಿಲ್‌ ಪಾವತಿಸುವ ಗೋಜಿಗೆ ಹೋಗಿರಲಿಲ್ಲ. ಈಗ ಇಂತಹ 52 ಗ್ರಾಪಂಗಳಿಗೆ ಬೆಸ್ಕಾಂ ನೋಟಿಸ್‌ ನೀಡಿ ಕುಳಿತಿದೆ. ತಕ್ಷಣವೇ ಜಿಪಂ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕಿದೆ. ಇಲ್ಲದಿದ್ದರೆ ಮಾಡದ ತಪ್ಪಿಗೆ ಗ್ರಾಮೀಣ ಜನರು ಶಿಕ್ಷೆ ಅನುಭವಿಸಬೇಕಾಗುತ್ತದೆ. ಶಾಲೆಗಳಿಗೂ ನೋಟಿಸ್‌ ಗ್ರಾಮ ಪಂಚಾಯಿತಿಗಳಷ್ಟೇ ಅಲ್ಲದೇ ಸರಕಾರಿ ಶಾಲೆಗಳಿಗೂ ಬೆಸ್ಕಾಂ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ನೋಟಿಸ್‌ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಆಘಾತಕ್ಕೆ ಕಾರಣವಾಗಿದೆ. ಕನಕಪುರ ತಾಲೂಕಿನ 53 ಸರಕಾರಿ ಶಾಲೆಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೋಟಿಸ್‌ ನೀಡಲಾಗಿದೆ. ಈ ಶಾಲೆಗಳು ಸೆಪ್ಟೆಂಬರ್‌ ತಿಂಗಳಿಂದ 25, 156 ರೂ. ವಿದ್ಯುತ್‌ ಶುಲ್ಕ ಪಾವತಿಸಬೇಕು ಎಂದು ಹೇಳಲಾಗಿದೆ. ಬಡ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವ ಬಡ ಸರಕಾರಿ ಶಾಲೆಗಳು ಇಷ್ಟೊಂದು ಹಣವನ್ನು ತರುವುದು ಎಲ್ಲಿಂದ. ಶಾಲೆಗಳಿಗೆ ವಿದ್ಯುತ್‌ ಕಡಿತಗೊಳಿಸಿದರೆ ಅಲ್ಲಿ ಕಲಿಯುತ್ತಿರುವ ಮಕ್ಕಳ ಗತಿ ಏನು ಎಂಬ ಮಾನವೀಯ ಪ್ರಶ್ನೆಗಳಿಗೆ ಉತ್ತರ ಇಲ್ಲ. ಒಂದೊಮ್ಮೆ ಎಚ್ಚರಿಕೆ ನೀಡಿದಂತೆಯೇ ಶಾಲೆಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದರೆ ಇದರಿಂದ ಮಧ್ಯಾಹ್ನದ ಬಿಸಿಯೂಟ, ಕಂಪ್ಯೂಟರ್‌ ಕ್ಲಾಸ್‌ಗಳಿಗೆ ತೊಂದರೆ ಆಗಲಿದೆ. ಜಿಲ್ಲಾಡಳಿತ ತುರ್ತು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ. ಪವರ್‌ ಕಟ್‌ ಆದರೆ ಗತಿ ಏನು? ಗ್ರಾಪಂಗಳಿಗೆ ಈಗಾಗಲೇ ಬೆಸ್ಕಾಂ ನೋಟಿಸ್‌ ನೀಡಿದೆ. ಇದೇ ಮೊದಲ ಬಾರಿಗೆ ಬಿಲ್‌ ಪಾವತಿಸದ ಪ್ರತಿ ಇಲಾಖೆಗಳಿಗೂ ಬೆಸ್ಕಾಂ ವಿದ್ಯುತ್‌ ಸ್ಥಗಿತದ ಎಚ್ಚರಿಕೆಯನ್ನು ನೀಡಿದೆ. ಒಂದು ವೇಳೆ ವಿದ್ಯುತ್‌ ಕಡಿತಗೊಂಡರೆ, ಜಿಲ್ಲೆಯಲ್ಲಿನ ಶೇ. 30ರಷ್ಟು ಹಳ್ಳಿಗಳು ಕತ್ತಲೆಯಲ್ಲಿ ಮುಳಗಲಿವೆ. ಶಾಲೆಗಳು ಸಹ ಇದೇ ಸಮಸ್ಯೆ ಎದುರಿಸಬೇಕು. ಕತ್ತಲೆಯಲ್ಲಿ ಇನ್ನಷ್ಟು ಕಳ್ಳತನ, ಕೊಲೆ , ಸುಲಿಗೆ ನಡೆದರೂ ಅಚ್ಚರಿ ಪಡಬೇಕಿಲ್ಲ. ಕೂಡಲೇ ನಮ್ಮ ಇಒಗಳ ಜೊತೆ ಮಾತನಾಡುತ್ತೇನೆ. ಬೆಸ್ಕಾಂ ಅಧಿಕಾರಿಗಳೊಂದಿಗೂ ಚರ್ಚಿಸುತ್ತೇನೆ. ಪ್ರತಿ ಗ್ರಾಪಂಗಳನ್ನು ಒಂದು ಘಟಕವೆಂದು ಪರಿಗಣಿಸಿ ಬೆಸ್ಕಾಂ ಬಿಲ್‌ ನೀಡುತ್ತಿದೆ. ಬಿಲ್‌ ಮೊತ್ತದ ಬಗ್ಗೆ ಮೊದಲಿನಿಂದಲೂ ದೂರುಗಳಿವೆ. ಅವುಗಳಲ್ಲಿ ಒಂದಿಷ್ಟನ್ನು ಬಗೆಹರಿಸಲಾಗಿದೆ. ಉಳಿದವುಗಳನ್ನೂ ಆದ್ಯತೆ ಮೇರೆಗೆ ಬಗೆಹರಿಸಲಾಗುವುದು. ಇಕ್ರಮ್‌, ಸಿಇಒರಾಮನಗರ ಜಿಲ್ಲಾಪಂಚಾಯತಿ


from India & World News in Kannada | VK Polls https://ift.tt/3Eu5Z7V

ಪುನೀತ್ ಅಂತ್ಯಸಂಸ್ಕಾರ: ತಾಳ್ಮೆ ಪ್ರದರ್ಶಿಸಿದ ಸಾರ್ವಜನಿಕರಿಗೆ ಧನ್ಯವಾದ ಸಲ್ಲಿಸಿದ ಆರಗ ಜ್ಞಾನೇಂದ್ರ

ಬೆಂಗಳೂರು: ಸಿನಿಮಾ ನಟ ನಿಧನದ ದುಖಃದ ಸಂದರ್ಭದಲ್ಲಿ ಸಾರ್ವಜನಿಕರು ಅತ್ಯಂತ ಶಾಂತಿ ಹಾಗೂ ತಾಳ್ಮೆಯನ್ನು ಪ್ರದರ್ಶಿಸಿದಕ್ಕೆ ಗೃಹ ಸಚಿವ ಧನ್ಯವಾದ ಸಲ್ಲಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಅಗಲಿದ ಚೈತನ್ಯಕ್ಕೆ, ಲಕ್ಷಾಂತರ ಜನರು, ಗೌರವ ಸಲ್ಲಿಸಿದ್ದಾರೆ. ನಮ್ಮೆಲ್ಲರ ನೆಚ್ಚಿನ ನಟರೂ, ಕನ್ನಡ ಚಿತ್ರರಂಗದ ಮುಕುಟ ಮಣಿಯೂ ಆಗಿದ್ದ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಹಾಗೂ ವಿಧಿ ವಿಧಾನಗಳು, ಅತ್ಯಂತ ಶಾಂತಿಯುತವಾಗಿ, ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿದೆ. ನೆಚ್ಚಿನ ನಟನ ಅಕಾಲಿಕ ನಿಧನದ ಇಂಥಹ ಒಂದು ದುಃಖದ ಸಂಧರ್ಬದಲ್ಲಿ, ಸಾರ್ವಜನಿಕರು, ಅತ್ಯಂತ ಶಾಂತಿ ಹಾಗೂ ತಾಳ್ಮೆಯನ್ನು ಪ್ರದರ್ಶಿಸಿ ಅಗಲಿದ ಚೈತನ್ಯಕ್ಕೆ ಲಕ್ಷಾಂತರ ಜನರು ಗೌರವ ಸಲ್ಲಿಸಿದ್ದಾರೆ. ಅತ್ಯಂತ ಶಿಸ್ತು ಬದ್ಧವಾಗಿ, ಎಷ್ಟೇ ಕಷ್ಟ ಗಳಿದ್ದರೂ, ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ, ನಿಭಾಯಿಸಿದ, ನಮ್ಮ ಪೊಲೀಸ್, ಬಿ ಬಿ ಎಂ ಪಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು, ಹಾಗೂ ಇತರರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ, ಎಂದು ಗೃಹ ಸಚಿವರು ತಿಳಿಸಿದ್ದಾರೆ. ಪುನೀತ್ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದ ಸಿಎಂ ಭಾನುವಾರ ಬೆಳಿಗ್ಗೆ ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು. ಸಚಿವರು, ಆಡಳಿತ ಹಾಗೂ ವಿರೋಧ ಪಕ್ಷಗಳ ಮುಖಂಡರು, ಚಿತ್ರರಂಗದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


from India & World News in Kannada | VK Polls https://ift.tt/3GAfggt

ಅರ್ಕಾವತಿಗೆ ಒತ್ತುವರಿ ಕಂಟಕ; ಕೆರೆ, ಕಾಲುವೆ ಒತ್ತುವರಿಯಿಂದ ನದಿ ಪಾತ್ರಕ್ಕೆ ಹಾನಿ!

ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಮೇಲೆ ಉಗಮವಾಗಿ ಕಾವೇರಿ ನದಿಯವರೆಗೆ ಸಾಗುವ ಅರ್ಕಾವತಿ ನದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಲು ಸಾಲು ಕೆರೆಗಳ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಗ್ರಾಮೀಣ ಭಾಗದ ಹಳ್ಳಿ, ನಗರ ಪ್ರದೇಶದಲ್ಲಿ ಬಿದ್ದ ಮಳೆ ನೀರನ್ನು ಹರಿಸುತ್ತಿದ್ದ ತೊರೆ, ಕಾಲುವೆಗಳಿಲ್ಲದಂತಾಗಿ ಕೆರೆಗಳಿಗೆ ನಿರೀಕ್ಷಿತ ಪ್ರಮಾಣದ ನೀರು ಹರಿಯಲು ಸಾಧ್ಯವಾಗಿಲ್ಲ. ಇದರ ಮಧ್ಯೆ ಕೆಲ ಗ್ರಾಮೀಣ ಕೆರೆಗಳು ತುಂಬಿ ಕೋಡಿ ಹರಿಯುತ್ತಿದ್ದರು ನದಿಗೆ ಜೀವ ಬಾರದಂತಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ವ್ಯಾಪ್ತಿ ಬಹುತೇಕ ಒತ್ತುವರಿಗೆ ಒಳಗಾಗಿದ್ದು, ಕೆರೆಗಳು ತುಂಬಿ ಕೋಡಿ ಹರಿದರು ನೀರು ಹರಿಯಲು ಅವಕಾಶವಿಲ್ಲದಂತಾಗಿವೆ. ನಂದಿಬೆಟ್ಟದಿಂದ ರಾಮನಗರದವರೆಗಿನ ಸಾಲಿನಲ್ಲಿ 1775 ಕೆರೆಗಳಿದ್ದು, ಕಾಲುವೆಗಳ ಒತ್ತುವರಿಯಿಂದಾಗಿ ನದಿಗೆ ಸ್ವರೂಪವಿಲ್ಲದಂತಾಗಿದೆ. ಹಲವೆಡೆ ನದಿ ಪಾತ್ರದ ಜಾಗವನ್ನು ಮುಚ್ಚಿ ಸಮತಟ್ಟಾಗಿ ಮಾಡಿಕೊಂಡು ಕೆಲ ರೈತರೇ ಕೃಷಿ ಚಟುವಟಿಕೆಗೆ ಮುಂದಾಗಿದೆ. ಹಮಾಮ್‌, ಶಿವಪುರ ಗ್ರಾಮದ ಬಳಿ ನದಿ ಜಾಗವೆಲ್ಲಾ ಒತ್ತುವರಿಗೆ ಬಲಿಯಾಗಿದ್ದು, ಕೆರೆಯಿಂದ ಕೆರೆಗೆ ಮಳೆನೀರು ಹರಿಯಲು ಸಾಧ್ಯವಾಗದಂತಾಗಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ನದಿ ಉಳಿಸುವ ಕೆಲಸಕ್ಕೆ ಮುಂದಾಗಬೇಕಿದೆ. ದಶಕದ ದುಸ್ಥಿತಿ ಕಳೆದ 2 ದಶಕಗಳಿಂದ ಜೀವ ಕಳೆದುಕೊಂಡಿರುವ ಅರ್ಕಾವತಿ ನದಿ ಒಟ್ಟು 190ಕಿಮೀ ತನ್ನ ವಿಸ್ತಾರತೆಯನ್ನು ಹಬ್ಬಿದ್ದು, ಸರಣಿ ಕೆರೆಗಳಲ್ಲಿ ತನ್ನ ಅಸ್ತಿತ್ವ ಕಂಡುಕೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರದ ಒಟ್ಟು 1775 ಕೆರೆಗಳು ಈ ಸರಣಿ ಕೆರೆಗಳ ಪಟ್ಟಿಯಲ್ಲಿದ್ದು, ಪ್ರತಿ ಕೆರೆ ತುಂಬಿದ ಬಳಿಕ ಕೋಡಿ ಮೂಲಕ ನೀರಿನ ಹರಿವು ನೆಲೆ ಕಂಡುಕೊಂಡಿದೆ. ನಗರೀಕರಣದ ಮರೆಯಲ್ಲಿ ರಾಜಕಾಲುವೆಗಳೆಲ್ಲಾ ಕಣ್ಮರೆಯಾಗಿದ್ದು, ಸ್ಥಳೀಯ ಕೆರೆಗೆ ಮಳೆ ನೀರು ಹರಿದು ಬರಲು ದಾರಿಯಿಲ್ಲದಂತಾಗಿದೆ. ಮಾರಕವಾದ ಒಳಚರಂಡಿ ದೊಡ್ಡಬಳ್ಳಾಪುರ ನಗರ ವ್ಯಾಪ್ತಿಯ ನಾಗರಕೆರೆ, ಮುತ್ತೂರು ಕೆರೆಯೊಳಗೆ ಒಳಚರಂಡಿ ಚೇಂಬರ್‌ಗಳನ್ನು ಹಾಕಲಾಗಿದೆ. ಹೀಗಾಗಿ, ಈ ಕೆರೆಗಳಲ್ಲಿ ನಿಂತ ನೀರು ಚೇಂಬರ್‌ಗಳ ಮೂಲಕ ಹೊರ ಹೋಗುತ್ತಿದ್ದು, ತುಂಬಿ ಕೋಡಿ ಹರಿಯಬೇಕಿದ್ದ ಕೆರೆಗಳು ಅವೈಜ್ಞಾನಿಕ ವ್ಯವಸ್ಥೆ ಸಮಸ್ಯೆಯಾಗಿ ಕಾಡುತ್ತಿದೆ. ಮಳೆ ನಿಂತ ಮೇಲೆ ಸಮೀಕ್ಷೆ ನಂದಿಬೆಟ್ಟದಿಂದ ಹೆಸರಘಟ್ಟದವರೆಗೆ ವರ್ಲ್ಡ್ವೈಡ್‌ ಫಂಡ್‌ ಫಾರ್‌ ನೇಚರ್‌ ಸಂಸ್ಥೆಯಿಂದ ನಡೆಯುತ್ತಿದ್ದ ಸಮೀಕ್ಷೆ ಮಳೆಯಿಂದಾಗಿ ಸ್ಥಗಿತಗೊಂಡಿದ್ದು, ಶೀಘ್ರ ಪುನಾರಂಭಗೊಳ್ಳಲಿದೆ. ಈ ಭಾಗದ ಸಾಕಷ್ಟು ಕೆರೆ, ಕಾಲುವೆಗಳ ಒತ್ತುವರಿ, ನದಿಯ ಸ್ವರೂಪ ಬದಲಾಗಿರುವ ಬಗ್ಗೆ ಸಮೀಕ್ಷೆಯಲ್ಲಿ ಉಲ್ಲೇಖವಿರಲಿದ್ದು ಮಳೆ ನಿಂತ ಮೇಲೆ ಸಮೀಕ್ಷೆ ನಡೆಸಲಾಗುತ್ತದೆ. ಅರ್ಕಾವತಿ ನದಿ ಪುನಶ್ಚೇತನಕ್ಕೆಂದು ಈ ಹಿಂದೆಯೂ ಅನೇಕ ಬಾರಿ ಪ್ರಯತ್ನಿಸಲಾಗಿದ್ದು, ಸರಕಾರದ ಸಾಕಷ್ಟು ಅನುದಾನ ನಿರುಪಯುಕ್ತವಾಗಿ ಖರ್ಚಾಗಿದೆ. ಇನ್ನಾದರೂ, ನದಿ ಉಳಿವಿಗೆ ಸರಕಾರ ಪಾರದರ್ಶಕ ಪ್ರಯತ್ನ ಮಾಡಬೇಕಿದೆ. ಮಂಜುನಾಥ್‌, ಅರ್ಕಾವತಿ ಪುನಶ್ಚೇತನ ಹೋರಾಟ ಸಮಿತಿ. ಜಿಲ್ಲೆಯ ಅರ್ಕಾವತಿ ನದಿ ವ್ಯಾಪ್ತಿಯ ಸಮೀಕ್ಷೆಗೆಂದು ಸಾಮಾಜಿಕ ಸಂಸ್ಥೆಯೊಂದು ಅನುಮತಿ ಪಡೆದಿದ್ದು, ಸಮೀಕ್ಷೆಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಕೆ. ಶ್ರೀನಿವಾಸ್‌, ಜಿಲ್ಲಾಧಿಕಾರಿ, ಬೆಂ.ಗ್ರಾ ಜಲಮೂಲಗಳ ಒತ್ತುವರಿ ಅಕ್ಷಮ್ಯ ಅಪರಾಧವಾಗಿದ್ದು, ಅರ್ಕಾವತಿ ನದಿ ವ್ಯಾಪ್ತಿಯ ಕೆರೆ, ಕಾಲುವೆಗಳನ್ನು ಒತ್ತುವರಿ ಮಾಡಿದ ಬಗ್ಗೆ ತಿಳಿದುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್‌ ಕೇಸ್‌ ಬುಕ್‌ ಮಾಡಲಾಗುತ್ತದೆ. ಎಂ.ಆರ್‌.ರವಿಕುಮಾರ್‌, ಸಿಇಒ, ಬೆಂ.ಗ್ರಾ ಜಿಪಂ.


from India & World News in Kannada | VK Polls https://ift.tt/3bqWOsl

ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿ ಸಮೀಪ ನೆಲ ಬಾಂಬ್ ಸ್ಫೋಟ: ಇಬ್ಬರು ಸೈನಿಕರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೌಶೆರಾ-ಸುಂದರ್ಬನಿ ವಲಯದಲ್ಲಿನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ನೆಲ ಬಾಂಬ್ ಸ್ಫೋಟವೊಂದರಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದು, ಇನ್ನೂ ಮೂವರು ಗಾಯಗೊಂಡಿದ್ದಾರೆ. ಈ ಘಟನೆ ಶನಿವಾರ ನಡೆದಿದೆ. ಬಳಿಯಲ್ಲಿ ಸೇನಾ ಗಸ್ತು ಪಡೆ ಪ್ರವೇಶಿಸಿತ್ತು. ಈ ಸಂದರ್ಭದಲ್ಲಿ ನಡೆದ ಸ್ಫೋಟದಲ್ಲಿ ಒಬ್ಬ ಅಧಿಕಾರಿ ಹಾಗೂ ಒಬ್ಬ ಸೈನಿಕ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡ ಮೂವರು ಯೋಧರನ್ನು ಸೇನಾ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಬಹಳ ಗಂಭೀರವಾಗಿದೆ. 'ಘಟನೆಯಲ್ಲಿ ಇಬ್ಬರು ಭೀಕರವಾಗಿ ಮರಣ ಹೊಂದಿದ್ದಾರೆ. ಇನ್ನೂ ಮೂವರು ಗಾಯಗೊಂಡಿದ್ದಾರೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ನೌಶೆರಾ ವಲಯದಲ್ಲಿ ಪ್ರದೇಶವಾರು ಗಸ್ತು ತಿರುಗುವ ವೇಳೆ ನೆಲ ಸಂಭವಿಸಿದೆ. ಇದರಲ್ಲಿ ಭಾರತೀಯ ಸೇನೆಯ ಇಬ್ಬರು ಯೋಧರು ಬಹಳ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಮೃತಪಟ್ಟರು. ಇತರೆ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ' ಎಂದು ಜಮ್ಮು ಪ್ರದೇಶದ ರಕ್ಷಣಾ ವಕ್ತಾರರು ಹೇಳಿದ್ದಾರೆ. 'ಲೆಫ್ಟಿನೆಂಟ್ ರಿಷಿ ಕುಮಾರ್ ಮತ್ತು ಸಿಪಾಯಿ ಮಂಜಿತ್ ಅವರು ಧೈರ್ಯಶಾಲಿಗಳು ಹಾಗೂ ಸೈನಿಕ ವೃತ್ತಿಗೆ ಬಹಳ ಬದ್ಧತೆವುಳ್ಳವರಾಗಿದ್ದರು. ಗಡಿಯಲ್ಲಿ ದೇಶದ ಕರ್ತವ್ಯದ ವೇಳೆ ಶ್ರೇಷ್ಠ ಬಲಿದಾನ ಮಾಡಿದ್ದಾರೆ. ಲೆಫ್ಟಿನೆಂಟ್ ರಿಷಿ ಕುಮಾರ್ ಅವರು ಬಿಹಾರದ ಬೇಗುಸರೈ ನಿವಾಸಿ. ಸಿಪಾಯಿ ಮಂಜಿತ್ ಸಿಂಗ್ ಅವರು ಪಂಜಾಬ್‌ನ ಭಟಿಂಡಾದ ಸಿರ್ವೆವಾಲಾದ ನಿವಾಸಿ. ಈ ಕೆಚ್ಚೆದೆಯ ಯೋಧರ ಮಹಾನ್ ತ್ಯಾಗಕಕ್ಕೆ ದೇಶ ಹಾಗೂ ಸೇನೆ ಎಂದೆಂದಿಗೂ ಋಣಿಯಾಗಿರಲಿದೆ' ಎಂದು ಅವರು ತಿಳಿಸಿದ್ದಾರೆ. ಜಮ್ಮುವಿನ ಪಿರ್ಪಾಂಜಲ್ ಪ್ರದೇಶದ ಭಾಗವಾಗಿರುವ ರಜೌರಿ ಜಿಲ್ಲೆಯ ವ್ಯಾಪ್ತಿಯಲ್ಲಿ ನೌಶೆರಾ ವಲಯವಿದೆ. ಕಳೆದ ಮೂರು ವಾರಗಳಿಂದ ಈ ಭಾಗದಲ್ಲಿ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆಗಳು ನಡೆಯುತ್ತಿವೆ. ಪೂಂಚ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅಡಗಿದ್ದಾರೆ ಎನ್ನಲಾದ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಈವರೆಗೂ ಇಬ್ಬರು ಅಧಿಕಾರಿಗಳು ಸೇರಿದಂತೆ ಒಂಬತ್ತು ಯೋಧರು ಹುತಾತ್ಮರಾಗಿದ್ದಾರೆ. ಆದರೆ ಇದುವರೆಗೂ ಭಯೋತ್ಪಾದಕರನ್ನು ಹೊಡೆದುರುಳಿಸುವುದು ಸಾಧ್ಯವಾಗಿಲ್ಲ. ಕಳೆದ 18 ವರ್ಷಗಳಲ್ಲಿಯೇ ಇದು ಈ ಪ್ರದೇಶದಲ್ಲಿ ನಡೆಯುತ್ತಿರುವ ಅತ್ಯಂತ ದೀರ್ಘಾವಧಿ ಕಾರ್ಯಾಚರಣೆ ಇದಾಗಿದೆ.


from India & World News in Kannada | VK Polls https://ift.tt/3GBWV2y

ಮುಂಗಾರಿಗೆ ಸಡ್ಡು ಹೊಡೆದ ಹಿಂಗಾರು; ಮಲೆನಾಡಿನಲ್ಲಿ ವಾಡಿಕೆಗಿಂತ ಶೇ.58 ಅಧಿಕ ಮಳೆ!

ಶಿವಮೊಗ್ಗ: ಹಂಗಾಮಿನಲ್ಲಿ ವಾಡಿಕೆ ಮೀರದ ಮಲೆನಾಡಿನ ಮಳೆಯು ಹಿಂಗಾರಿನ ಮೊದಲ ತಿಂಗಳಲ್ಲೇ ಆರ್ಭಟಿಸಿದೆ. ಮುಂಗಾರು ಹಂಗಾಮಿನ ಮೊದಲ ಮೂರು ತಿಂಗಳು ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಕಡೇ ತಿಂಗಳು ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ತುಸು ಹೆಚ್ಚು ಸುರಿಯಿತು. ಅಕ್ಟೋಬರ್‌ನ ಎಲ್ಲ ವಾರಗಳಲ್ಲಿ ತಲಾ 2-3 ದಿನ ಧಾರಾಕಾರವಾಗಿ ಸುರಿದ ಮಳೆಯು ವಾಡಿಕೆಯನ್ನು ಮೀರಿಸಿತು. ವಾಡಿಕೆ(147 ಮಿ.ಮೀ.)ಗಿಂತ ಅಧಿಕ(232ಮಿ.ಮೀ.) ಮಳೆ ಸುರಿಯಿತು. ಈ ಎರಡು ತಿಂಗಳು ಸುರಿದ ಮಳೆಯು ಜಿಲ್ಲೆಯ ಕೆರೆ ಕಟ್ಟೆಗಳನ್ನು ನಿರಂತರವಾಗಿ ತುಂಬಿ ಹರಿಯುವಂತೆ ಮಾಡಿತು. ಭದ್ರಾ ಜಲಾಶಯದಲ್ಲಿ ಒಟ್ಟು ಐದು ಬಾರಿ ಕ್ರಸ್ಟ್‌ಗೇಟ್‌ ತೆರೆದು ಮುಚ್ಚಲಾಯಿತು. ಮೊದಲ ಬಾರಿಗೆ ಜುಲೈನಲ್ಲೇ ಭರ್ತಿಯಾದ ಭದ್ರಾ ಜಲಾಶಯದಿಂದ ನಿರಂತರ ನಾಲ್ಕು ತಿಂಗಳ ಕಾಲ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಯಿತು. ಮುಂಗಾರು ಹಂಗಾಮು ಅಂತ್ಯ ಸಮೀಪಿಸುತ್ತಿರುವ ಸಮಯದಲ್ಲೂ ಜಲಾಶಯದಲ್ಲಿ ಭರ್ತಿ ನೀರಿರುವುದು ಬೇಸಿಗೆ ಬೆಳೆ ಮತ್ತು ಮಧ್ಯ ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆ ನೀಗಿಸಿದಂತಾಗಿದೆ. ಆದರೆ, ಮೋಡ ಕವಿದ ವಾತಾವರಣ, ಬಿಸಿಲು ಮಳೆಯ ಕಣ್ಣಾಮುಚ್ಚಾಲೆ ಮತ್ತು ಧಾರಾಕಾರ ಮಳೆಯು ಪ್ರದೇಶದಲ್ಲಿ ಅಡಕೆ ಮರಗಳಿಗೆ ಮಾರಕವಾಗಿ ಪರಿಣಮಿಸಿದೆ. ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನಲ್ಲಿ ಅಡಕೆ ಬೆಳೆಗೆ ಎಲೆಚುಕ್ಕೆ ರೋಗ ಕಾಣಿಸಿಕೊಂಡು ಇಳುವರಿ ಕುಂಠಿತಗೊಳಿಸಿದೆ. ಕೆಲ ರೈತರಿಗೆ ತೋಟ ಉಳಿಸಿಕೊಳ್ಳುವುದೇ ಸವಾಲು ಎನ್ನುವಂತಾಗಿದೆ. ರೈತರು ನಿರಂತರ ಔಷಧೋಪಚಾರ ಪ್ರಕ್ರಿಯೆಯಲ್ಲಿದ್ದಾರೆ. ರೋಗ ನಿಯಂತ್ರಣಕ್ಕೆ ಬಂದರೂ ತೋಟ ಸುಧಾರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ರೋಗಬಾಧೆಗೆ ಒಳಗಾದ ತೋಟದಲ್ಲಿ ಅಡಕೆ ಇಳುವರಿ ತೀವ್ರ ಕುಸಿತವಾಗಲಿದೆ. ಅರೆಮಲೆನಾಡು ಪ್ರದೇಶದಲ್ಲಿ ಕೆಲವೆಡೆ ಸ್ವಲ್ಪಮಟ್ಟಿಗೆ ಭತ್ತದ ಬೆಳೆಗೂ ಹಿನ್ನೆಡೆಯುಂಟು ಮಾಡಿತು. ಕಾಳುಕಟ್ಟುವ ಸಮಯದಲ್ಲಿ ಮೋಡ ಕವಿದ ವಾತಾವರಣವು ಇಳುವರಿಯನ್ನು ಸ್ವಲ್ಪಮಟ್ಟಿಗೆ ಕುಂಠಿತಗೊಳಿಸಿದೆ. ಅಲ್ಲಲ್ಲಿ ಬೆಂಕಿ ರೋಗ ಮತ್ತು ತೆನೆ ಕವಚ ಕೊಳೆ ರೋಗ ಕಾಣಿಸಿಕೊಂಡಿತ್ತು. ಔಷಧೋಪಚಾರದಿಂದ ನಿಯಂತ್ರಣಕ್ಕೆ ಬಂದಿದೆ. ಸಮಾಧಾನದ ಸಂಗತಿ ಎಂದರೆ ಭತ್ತದ ಬೆಳೆಗೆ ವ್ಯಾಪಕವಾಗಿ ರೋಗ ಕಾಣಿಸಿಕೊಳ್ಳಲಿಲ್ಲ. (ಮಳೆ ಮಿ.ಮೀ.ಗಳಲ್ಲಿ) ಜನವರಿಯಿಂದ ಅಕ್ಟೋಬರ್‌ ವಾಡಿಕೆ 2266 ವಾಸ್ತವ 2247 ಶೇ.ವ್ಯತ್ಯಾಸ -1 ಜೂನ್‌ನಿಂದ ಸೆಪ್ಟೆಂಬರ್‌ ವಾಡಿಕೆ 1990 ವಾಸ್ತವ 1694 ಶೇ.ವ್ಯತ್ಯಾಸ -15 ತಿಂಗಳು -ವಾಡಿಕೆ- ವಾಸ್ತವ- ಶೇ.ವ್ಯತ್ಯಾಸ
  • ಜೂನ್‌- 47- 400 -15
  • ಜುಲೈ- 789- 754 -5
  • ಆಗಸ್ಟ್‌- 555- 281 -49
  • ಸೆಪ್ಟೆಂಬರ್‌ -198- 259- 31
  • ಅಕ್ಟೋಬರ್‌- 147- 232 -58


from India & World News in Kannada | VK Polls https://ift.tt/3o1efpx

ಜೈಲಿನಲ್ಲೂ ಪಾಠ ಶುರು; ರಾಜ್ಯದ 50 ಕಾರಾಗೃಹಗಳಲ್ಲಿ ವಿದ್ಯಾದೀವಿಗೆ ಯೋಜನೆಯಡಿ ಕಲಿಕೆ!

ಕೆ.ಎಚ್‌.ರುದ್ರಯ್ಯ ಚಿಕ್ಕಮಗಳೂರು ಚಿಕ್ಕಮಗಳೂರು: ಬಡತನ, ನಿರುದ್ಯೋಗ, ಅನಕ್ಷರತೆ ಮತ್ತಿತರೆ ಸಾಮಾಜಿಕ ಕಾರಣದಿಂದ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಇಂತಹ ಅಪರಾಧ ಕೃತ್ಯಗಳ ಆರೋಪ ಹೊತ್ತು ಹಕ್ಕಿಯಾಗಿರುವವರಿಗೆ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹನಿಗೆ ತರಲು ರಾಜ್ಯದ ಎಲ್ಲ ಜೈಲುಗಳಲ್ಲಿ ,ಪ್ರವಚನ ಶುರುವಾಗಲಿದೆ. ಅನಕ್ಷರತೆ ಮತ್ತಿತರೆ ಕಾರಣದಿಂದ ಸಮಾಜದಲ್ಲಿ ದಿನೇದಿನೆ ಅಪರಾಧಕೃತ್ಯಗಳನ್ನು ಕಾಣುತ್ತಿದ್ದೇವೆ. ಅಪರಾಧಿಗಳಿಗೆ ಸಜೆ ಆದಲ್ಲಿ ಅವರು ಹಿಂದಿನ ಕೆಟ್ಟ ನಡವಳಿಕೆ ತಿದ್ದಿಕೊಳ್ಳುತ್ತಾರಾ ಎಂಬ ಪ್ರಶ್ನೆ ಮುಂದಿದೆ. ಈ ಹಿನ್ನೆಲೆಯಲ್ಲಿ ಸರಕಾರ ರಾಜ್ಯದ ಎಲ್ಲ 50 ಕಾರಾಗೃಹಗಳಲ್ಲಿ ಅನಕ್ಷರಸ್ಥರನ್ನು ಶಿಕ್ಷಣವಂತರನ್ನಾಗಿ ಮಾಡಲು ಜೈಲುಗಳಲ್ಲಿ ಇದೇ ನ.1ರಿಂದ ಶಿಕ್ಷಕರಿಂದ ನಿರಕ್ಷರ ಕುಕ್ಷಿಗಳಿಗೆ ಅಕ್ಷರಜ್ಞಾನದ ತಿಳಿವಳಿಕೆ ಮೂಡಿಸಲು ಚಿಂತನೆ ನಡೆಸಿದೆ. ಕೋಪದ ಕೈಗೆ ಬುದ್ಧಿ ನೀಡಿ ಅಥವಾ ಆಸೆ, ಆಮಿಷಗಳಿಗೆ ಬಲಿಯಾಗಿ ಅಪರಾಧ ಕೃತ್ಯ ಎಸಗಿದ ಆರೋಪದಲ್ಲಿ ಜೈಲು ಸೇರಿದವರು ಮುಂದೆ ಇಂತಹ ಕೃತ್ಯ ಮುಂದುವರಿಸಬಾರದು. ಅವರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದು ಅಕ್ಷರ ಜ್ಞಾನದ ಸದುದ್ದೇಶವಾಗಿದೆ. ಜಿಲ್ಲೆ ಸಾಕ್ಷರತಾ ಪ್ರಮಾಣದಲ್ಲಿ 2011ನೇ ಜನಗಣತಿ ಆಧಾರದಲ್ಲಿ ಶೇ.79.29 ಸಾಧನೆ ಮಾಡಿದೆ. ನೂತನ ಸಮೀಕ್ಷೆ ಆದಲ್ಲಿ ಶೇ.85ರ ಗಡಿ ದಾಟಲಿದೆ ಎಂಬುದು ತಜ್ಞರ ಅಭಿಪ್ರಾಯ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರಾಮಾಣಿಕನಿಂದ ಹಿಡಿದು ಖೈದಿಯವರೆಗೆ ಯಾರೂ ಕೂಡ ಅನಕ್ಷರಸ್ತರಾಗಿರಬಾರದು ಎಂಬ ಕಾರಣಕ್ಕೆ ಜಿಲ್ಲಾ ಲೋಕಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾಸಾಕ್ಷರತಾ ಸಮಿತಿಯಿಂದ ಇಲಾಖೆಯ ವಿದ್ಯಾದೀವಿಗೆ ಯೋಜನೆಯಲ್ಲಿ ಶಿಕ್ಷೆಯಿಂದ ಶಿಕ್ಷಣದೆಡೆಗೆ ಘೋಷವಾಕ್ಯದಡಿ ಕಾರಾಗೃಹದಲ್ಲಿ ಜೈಲು ಹಕ್ಕಿಗಳಿಗೆ ಪಾಠ ಕಲಿಸಲು ಯೋಜನೆ ಸಿದ್ದವಾಗಿದೆ. ನಗರದ ಕಾರಾಗೃಹದಲ್ಲಿ ಒಟ್ಟು 240 ಮಂದಿ ವಿಚಾರಾಣಾಧೀನ ಖೈದಿಗಳಿದ್ದು ಅವರಲ್ಲಿ 46 ಮಂದಿ ಅನಕ್ಷರಸ್ಥರು, 21 ಮಂದಿ ಅರೆ ಅನಕ್ಷರಸ್ಥರು ಸೇರಿ ಒಟ್ಟು 67 ಮಂದಿ ನಿರಕ್ಷರಕುಕ್ಷಿಗಳಿದ್ದಾರೆ. ಓದು ಬರಹ ಏನೂ ಗೊತ್ತಿಲ್ಲದವರು ಅನಕ್ಷರಸ್ಥರು, 1ರಿಂದ 4ನೇ ತರಗತಿವರೆಗೆ ಓದಿ ಈಗ ಅದನ್ನೆಲ್ಲಾ ಮರೆತಿರುವವರನ್ನು ಅರೆ ಅನಕ್ಷರಸ್ಥರು ಎಂದು ಗುರುತಿಸಲಾಗಿದೆ. ಎಲ್ಲರಿಗೂ ಶಿಕ್ಷಣ ನೀಡುವುದು ಯೋಜನೆ ಉದ್ದೇಶವಾಗಿದೆ. ವಾರ್ಷಿಕ 200 ಗಂಟೆ ಬೋಧನೆ ಜೈಲುಹಕ್ಕಿಗಳಿಗೆ ಸರಳ ಓದು ಬರಹ, ಕೂಡುವ, ಕಳೆಯುವ ಲೆಕ್ಕದ ಜತೆಗೆ ನೋಟುಗಳನ್ನು ಗುರುತಿಸುವಿಕೆ, ಗುರು ಹಿರಿಯರನ್ನು ಗೌರವಿಸುವುದು, ದೇಶಪ್ರೇಮ, ಮಾನವೀಯ ಮೌಲ್ಯಗಳ ಅಳವಡಿಕೆ ಮತ್ತಿತರೆ ಒಂದಷ್ಟು ನೈತಿಕತೆಯ ಪಾಠ ಮಾಡಲಾಗುವುದು. ಪಾಠ ಮಾಡಲೆಂದೇ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಒಬ್ಬ ಶಿಕ್ಷಕರನ್ನು ಈಗಾಗಲೇ ನಿಯೋಜಿಸಲಾಗಿದೆ. ಅವರು ನ.1ರಿಂದ ದಿನಕ್ಕೆ ಒಂದು ಗಂಟೆ ಅಥವಾ 2 ಗಂಟೆಯಂತೆ ವರ್ಷದಲ್ಲಿ 200 ಗಂಟೆ ಕಾಲ ಪಾಠ ಮಾಡಿ ಅನಕ್ಷರಸ್ಥನ್ನು ಸಾಕ್ಷರರನ್ನಾಗಿಸಲಿದ್ದಾರೆ. ಪಠ್ಯ ಬೋಧನೆ ಪೂರ್ಣಗೊಂಡ ನಂತರ ಕೈದಿಗಳಿಗೆ ಪರೀಕ್ಷೆ ನಡೆಸಿ ಅದರಲ್ಲಿ ಪಾಸಾದವರಿಗೆ ಸರಕಾರ ಸಾಕ್ಷರತಾ ಪ್ರಮಾಣಪತ್ರ ನೀಡಲಿದೆ. ಒಟ್ಟಾರೆ ಕೈದಿಗಳು ಕೂಡ ಸಾಕ್ಷರರಾದಲ್ಲಿ ಲೋಕ ಜ್ಞಾನ ತಿಳಿದು ಮುಂದೆ ಅವರೂ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಲಿ ಎಂಬ ಸದುದ್ದೇಶ ಈ ಯೋಜನೆಯ ಹಿಂದಿದೆ. ಜಿಲ್ಲೆಯಲ್ಲಿ ಶೇ.100ರಷ್ಟು ಸಾಕ್ಷರತೆ ಸಾಧಿಸುವ ನಿಟ್ಟಿನಲ್ಲಿ ಆಗಲೇ ಸಾಕಷ್ಟು ಪ್ರಗತಿಗೆ ಅಡಿಯಿಟ್ಟಿದ್ದೇವೆ. ಕಾರಾಗೃಹದಲ್ಲೂ ಅನಕ್ಷರಸ್ಥರಿದ್ದಾರೆ ಎಂಬುದನ್ನು ತಿಳಿದ ಸರಕಾರ ವಿದ್ಯಾದೀವಿಗೆ ಎಂಬ ಯೋಜನೆ ಅಡಿ ಅವರಿಗೆ ಶಿಕ್ಷಣ ನೀಡಲು ಮುಂದಾಗಿದೆ. ಇದೆ ನ.1ರಿಂದ ಪಾಠ ಪ್ರವಚನಗಳು ಆರಂಭವಾಗಲಿವೆ. ರಪೀಕ್‌ ಅಹ್ಮದ್‌ಖಾನ್‌, ಜಿಲ್ಲಾಲೋಕಶಿಕ್ಷಣಾಧಿಕಾರಿ


from India & World News in Kannada | VK Polls https://ift.tt/2Y0Lv7f

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...