28 ಎಸೆತಗಳಲ್ಲಿ ರಿಷಭ್ ಪಂತ್‌ ಫಿಫ್ಟಿ, ಕಪಿಲ್‌ ದೇವ್‌ ದಾಖಲೆ ಪುಡಿಪುಡಿ!

ಬೆಂಗಳೂರು: ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ ಎನಿಸಿಕೊಂಡಿರುವ ವಿಕೆಟ್‌ಕೀಪರ್‌ ರಿಷಭ್‌ ಪಂತ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಸರಲ್ಲಿದ್ದ 40 ವರ್ಷ ಹಳೆಯ ಬ್ಯಾಟಿಂಗ್‌ ದಾಖಲೆ ಒಂದನ್ನು ಪುಡಿಪುಡಿ ಮಾಡಿದ್ದಾರೆ. ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ 24 ವರ್ಷದ ಎಡಗೈ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌, ಟೀಮ್ ಇಂಡಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಭಾರತ-ಶ್ರೀಲಂಕಾ ತಂಡಗಳು ಇದೇ ಮೊದಲ ಬಾರಿ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಮುಖಾಮುಖಿ ಆಗಿವೆ. ಪಂದ್ಯದ ಎರಡನೇ ದಿನವಾದ (ಮಾ.13) ಭಾನುವಾರ ಫೋರ್‌-ಸಿಕ್ಸರ್‌ಗಳ ಸುರಿಮಳೆಗೈದ ಪಂತ್‌ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಕಿಕ್ಕಿರಿದು ತುಂಪಿದ್ದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಬರೋಬ್ಬರಿ 2 ವರ್ಷಗಳ ಬಳಿಕ ಕ್ರಿಕೆಟ್‌ ವೀಕ್ಷಣೆಗಾಗಿ ಕ್ರೀಡಾಂಗಣಕ್ಕೆ ಬಂದಿದ್ದ ಬೆಂಗಳೂರು ಪ್ರೇಕ್ಷಕರಿಗೆ ಪಂತ್‌ ಭರಪೂರ ಮನೋರಂಜನೆ ಒದಗಿಸಿದರು. ಅಂದಹಾಗೆ ಇದಕ್ಕೂ ಮುನ್ನ ಭಾರತ ತಂಡಕ್ಕೆ ಮೊದಲ ವಿಶ್ವಕಪ್‌ (1983) ಗೆದ್ದು ಕೊಟ್ಟ ಕ್ಯಾಪ್ಟನ್‌ ಕಪಿಲ್‌ ದೇವ್‌ ಹೆಸರಲ್ಲಿ ಟೀಮ್ ಇಂಡಿಯಾ ಪರ ಅತಿ ವೇಗದ ಟೆಸ್ಟ್ ಫಿಫ್ಟಿ ಬಾರಿಸಿದ ದಾಖಲೆ ಇತ್ತು. 1982ರಲ್ಲಿ ಕಪಿಲ್‌ ದೇವ್‌ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಕರಾಚಿ ಟೆಸ್ಟ್‌ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ 50 ರನ್‌ ಸಿಡಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿದಿದ್ದಾರೆ. ವಿಶ್ವ ಮಟ್ಟದಲ್ಲಿ ಅತಿ ವೇಗದ ಟೆಸ್ಟ್‌ ಫಿಫ್ಟಿ ಬಾರಿಸಿದ ದಾಖಲೆ ಪಾಕಿಸ್ತಾನದ ಶಾಹಿದ್‌ ಅಫ್ರಿದಿ ಹೆಸರಲ್ಲಿದೆ. ಪಂತ್‌ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ವೇಗದ ಫಿಫ್ಟಿ
  • ರಿಷಭ್‌ ಪಂತ್‌ (28 ಎಸೆತ): 2022ರಲ್ಲಿ ಶ್ರೀಲಂಕಾ ಎದುರು (ಬೆಂಗಳೂರು)
  • ಕಪಿಲ್‌ ದೇವ್‌ (30 ಎಸೆತ): 1982ರಲ್ಲಿ ಪಾಕಿಸ್ತಾನ ಎದುರು (ಕರಾಚಿ)
  • ಶಾರ್ದುಲ್‌ ಠಾಕೂರ್‌ (31 ಎಸೆತ): 2021ರಲ್ಲಿ ಇಂಗ್ಲೆಂಡ್‌ ಎದುರು (ಓವಲ್)
  • ವೀರೇಂದ್ರ ಸೆಹ್ವಾಗ್‌ (32 ಎಸೆತ): 2008ರಲ್ಲಿ ಇಂಗ್ಲೆಂಡ್ ಎದುರು (ಚೆನ್ನೈ)
ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ
  • ಶಾಹಿದ್‌ ಅಫ್ರಿದಿ (26 ಎಸೆತ): 2005ರಲ್ಲಿ ಭಾರತ ಎದುರು
  • ಇಯಾನ್‌ ಬಾಥಮ್‌ (28 ಎಸೆತ): 1981ರಲ್ಲಿ ಭಾರತ ಎದುರು
  • ರಿಷಭ್ ಪಂತ್‌ (28 ಎಸೆತ): 2022ರಲ್ಲಿ ಶ್ರೀಲಂಕಾ ಎದುರು
  • ಕಪಿಲ್‌ ದೇವ್‌ (30 ಎಸೆತ): 1982ರಲ್ಲಿ ಪಾಕಿಸ್ತಾನ ಎದುರು
  • ಅರ್ಜುನ ರಣತುಂಗ (31 ಎಸೆತ): 1986ರಲ್ಲಿ ಭಾರತ ಎದುರು
  • ಶಾರ್ದುಲ್‌ ಠಾಕೂರ್‌ (31 ಎಸೆತ): 2021ರಲ್ಲಿ ಇಂಗ್ಲೆಂಡ್‌ ಎದುರು
ಫಿಫ್ಟಿ ಬಳಿಕ ವಿಕೆಟ್‌ ಕೈಚೆಲ್ಲಿದ ಪಂತ್‌ ಕ್ರೀಸ್‌ಗೆ ಬಂದ ಕೂಡಲೇ ಸಿಕ್ಸರ್‌ ಮೂಲಕ ಖಾತೆ ತೆರೆದ ರಿಷಭ್‌ ಪಂತ್‌, ಸ್ಫೋಟಕ ಬ್ಯಾಟಿಂಗ್‌ ನಡೆಸುವ ಲೆಕ್ಕಾಚಾರದಲ್ಲಿದ್ದು. ಚೆಂಡನ್ನು ಕ್ರೀಡಾಂಗಣದ ಮೂಲೆ ಮೂಲೆ ಸೇರಿಸಿದ ಪಂತ್‌ 7 ಫೋರ್‌ ಮತ್ತು 2 ಸಿಕ್ಸರ್‌ಗಳ ನೆರವಿನಿಂದ ಅರ್ಧಶತಕ ಬಾರಿಸಿದರು. ಬಳಿಕ ಪ್ರವೀಣ್‌ ಜಯವಿಕ್ರಮ (78ಕ್ಕೆ 4) ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್‌ ಕೈಚೆಲ್ಲಿದರು. 31 ಎತೆಗಳಲ್ಲಿ 50 ರನ್‌ಗಳೊಂದಿಗೆ ಪೆವಿಲಿಯನ್‌ ಸೇರಿದರು. ಮೊದಲ ಇನಿಂಗ್ಸ್‌ನಲ್ಲಿ 143 ರನ್‌ಗಳ ಭಾರಿ ಮುನ್ನಡೆ ಗಳಿಸಿದ ಭಾರತ ತಂಡ, ಎರಡನೇ ಇನಿಂಗ್ಸ್‌ನಲ್ಲಿ ಶ್ರೇಯಸ್‌ ಅಯ್ಯರ್‌ (67) ಮತ್ತು ರಿಷಭ್ ಪಂತ್‌ (50) ಅವರ ಅರ್ಧಶತಕಗಳ ಬಲದಿಂದ 300 ರನ್‌ಗಳ ಗಡಿ ದಾಟಿ, ಎದುರಾಳಿಗೆ 447 ರನ್‌ಗಳ ಅಸಾಧ್ಯದ ಗುರಿ ನೀಡಿತು. ಮೊದಲ ಇನಿಂಗಸ್‌ನಲ್ಲಿ 252 ರನ್‌ ಗಳಿಸಿದ ಭಾರತ, ಎದುರಾಳಿಯನ್ನು 109 ರನ್‌ಗಳಿಗೆ ಆಲ್‌ಔಟ್‌ ಮಾಡಿತ್ತು. ಇನ್ನು ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಎರಡನೇ ಆವೃತ್ತಿಯ ಭಾಗವಾಗಿ ಭಾರತ ತಂಡ ಶ್ರೀಲಂಕಾ ಎದುರು ಎರಡು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯನ್ನಾಡುತ್ತಿದೆ. ಮಹಾಲಿಯಲ್ಲಿ ನಡೆದ ಪ್ರಥಮ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 222 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಈಗ ಬೆಂಗಳೂರು ಟೆಸ್ಟ್‌ ಗೆದ್ದರೆ, ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/4JuSxGw

ಗೋವಾ, ಉತ್ತರಾಖಂಡ್‌ನಲ್ಲಿ ಮುಂದುವರಿದ ಸಿಎಂ ಆಯ್ಕೆ ಗೊಂದಲ! ರಿತು ಖಂಡೂರಿಗೆ ಒಲಿಯುತ್ತಾ ಅದೃಷ್ಟ?

ಹೊಸದಿಲ್ಲಿ: ಉತ್ತರಾಖಂಡ ಮತ್ತು ಗೋವಾಗಳಲ್ಲಿ ಆಯ್ಕೆ ಕುರಿತು ಬಿಜೆಪಿಯಲ್ಲಿ ಗೊಂದಲ ಮುಂದುವರಿದಿದೆ. ಉತ್ತರಾಖಂಡದಲ್ಲಿ ಹಾಲಿ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಸೋತಿದ್ದರೆ, ಗೋವಾದಲ್ಲಿ ಹಾಲಿ ಸಿಎಂ ಪ್ರಮೋದ್‌ ಸಾವಂತ್‌ ನಾಯಕತ್ವದ ಬಗ್ಗೆ ಕೆಲವರಿಂದ ಅಸಮಾಧಾನ ವ್ಯಕ್ತವಾಗಿರುವುದು ನಾಯಕರನ್ನು ಗೊಂದಲದಲ್ಲಿ ಸಿಲುಕಿಸಿದೆ. ಪಕ್ಷದಲ್ಲಿಉತ್ತರಾಖಂಡ ಉಸ್ತುವಾರಿಯಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ, ಚುನಾವಣಾ ಉಸ್ತುವಾರಿಯಾಗಿದ್ದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ವೀಕ್ಷಕರಾಗಿ ಡೆಹ್ರಾಡೂನ್‌ಗೆ ತೆರಳಿರುವ ಕೇಂದ್ರ ಸಚಿವರಾದ ಪಿಯೂಶ್‌ ಗೋಯಲ್‌ ಮತ್ತು ಧರ್ಮೇಂದ್ರ ಪ್ರಧಾನ್‌ ಅವರು ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ರಾಜ್ಯ ನಾಯಕರು, ನೂತನ ಶಾಸಕರ ಜತೆ ಚರ್ಚೆ ನಡೆಸುತ್ತಿದ್ದಾರೆ. ಹಾಲಿ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಚುನಾವಣೆಯಲ್ಲಿಸೋತಿದ್ದರೂ, ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆದ ಕಾರಣ ಧಾಮಿ ಅವರಿಗೆ ಮತ್ತೊಂದು ಅವಕಾಶ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದರೆ, ಸೋತಿರುವುದರಿಂದ ಮತ್ತೆ ಅವಕಾಶ ನೀಡುವುದು ಬೇಡ ಎಂಬ ಅಭಿಪ್ರಾಯವನ್ನು ಹಲವರು ಹೇಳುತ್ತಿದ್ದಾರೆ. ಹೀಗಾಗಿ ಪಕ್ಷದ ರಾಷ್ಟ್ರೀಯ ನಾಯಕರು ಗೊಂದಲದಲ್ಲಿ ಮುಳುಗಿದ್ದಾರೆ. ಈ ನಡುವೆ, ಕೇಂದ್ರ ನಾಯಕರು ಮಾಜಿ ಮುಖ್ಯಮಂತ್ರಿ ಬಿಸಿ ಖಂಡೂರಿ ಅವರ ಪುತ್ರಿ ರಿತು ಖಂಡೂರಿ ಅವರನ್ನು ಹೊಸದಿಲ್ಲಿಗೆ ಕರೆಸಿಕೊಂಡಿದ್ದಾರೆ. ರಿತು ಅವರು ಸತತ ಎರಡನೇ ಅವಧಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆ ರಿತು ಖಂಡೂರಿ ಅವರೇ ಮುಂದಿನ ಮುಖ್ಯಮಂತ್ರಿ ಆಗಬಹುದು ಎಂಬ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿದೆ. ಆದರೆ, ಮೋದಿ, ಅಮಿತ್‌ ಶಾ ಹಾಗೂ ಜೆಪಿ ನಡ್ಡಾ ಅವರ ಒಲವು ಯಾರತ್ತ ಇದೆ ಎಂಬುದು ಬಹಿರಂಗವಾಗಿಲ್ಲ. ಇನ್ನು, ಗೋವಾದಲ್ಲಿ ಪ್ರಮೋದ್‌ ಸಾವಂತ್‌ ನಾಯಕತ್ವದ ಕುರಿತು ಕೆಲವು ಶಾಸಕರು ಅಪಸ್ವರ ಎತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಆಯ್ಕೆ ಕುರಿತು ತೀರ್ಮಾನ ಅಂತಿಮವಾಗಿಲ್ಲ. ಇದರ ನಡುವೆಯೇ, ರಾಜ್ಯಪಾಲರು ಮಂಗಳವಾರ (ಮಾರ್ಚ್ 15)ದಿಂದ ವಿಧಾನಸಭೆ ಅಧಿವೇಶನ ಕರೆಯುವ ಸಂಬಂಧ ಆದೇಶ ಹೊರಡಿಸಿದ್ದಾರೆ. ಅಂದು ಹಿರಿಯ ಶಾಸಕ ಗಣೇಶ್‌ ಗಾಂವ್ಕರ್‌ ಅವರು ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಮಣಿಪುರದಲ್ಲಿ ಸಹ ನೂತನ ಮುಖ್ಯಮಂತ್ರಿ ಆಯ್ಕೆ ಕುರಿತು ಪಕ್ಷ ಯಾವುದೇ ಹೇಳಿಕೆ ನೀಡಿಲ್ಲ. ''ಪಕ್ಷವು ವೀಕ್ಷಕರನ್ನು ರವಾನಿಸಿ, ಶಾಸಕರ ಅಭಿಪ್ರಾಯ ಪಡೆದ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿದೆ,'' ಎಂದು ಸಿಎಂ ಎನ್‌ ಬಿರೇನ್‌ ಸಿಂಗ್‌ ತಿಳಿಸಿದ್ದಾರೆ. ಪ್ರಧಾನಿಯನ್ನು ಭೇಟಿ ಮಾಡಿದ ಯೋಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಹೊಸದಿಲ್ಲಿಯಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಸಂಘಟನಾ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಅವರನ್ನು ಭೇಟಿ ಮಾಡಿದರು. ಸಂಪುಟದ ಸ್ವರೂಪ, ಸಂಪುಟಕ್ಕೆ ಆಯ್ಕೆಯ ಮಾನದಂಡಗಳ ಕುರಿತು ಅವರು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


from India & World News in Kannada | VK Polls https://ift.tt/6LQVuAl

ನಡುರಸ್ತೆಯಲ್ಲಿ ಅಪಾಯಕಾರಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ 8 ಮಂದಿಯನ್ನು ಬಂಧಿಸಿದ ಮಂಗಳೂರು ಪೊಲೀಸರು

ಮಂಗಳೂರು: ಯೌವನದಲ್ಲಿ ಹುಚ್ಚು ಮನಸ್ಸು ಏನೇನೋ ಸಾಹಸಕ್ಕೆ ಪ್ರೇರಣೆ ನೀಡುತ್ತಿದೆ. ಆದರೆ ಸ್ವಲ್ಪ ಎಡವಿದರೂ ಜೀವಕ್ಕೆ ಆಪತ್ತು ನಿಶ್ಚಿತ. ಇಂತಹುದೇ ಅತಿರೇಕದ ಸಾಹಸಕ್ಕೆ ಮುಂದಾಗಿ ಬೈಕ್‌ ಸ್ಟಂಟ್‌ ಮಾಡಿದ 8 ಮಂದಿ ಯುವಕರನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ತೌಸಿಫ್‌ ಮಹಮ್ಮದ್‌, ಮಹಮ್ಮದ್‌ ಸಫ್ವಾನ್‌, ಮಹಮ್ಮದ್‌ ಅನೀಸ್‌, ಮಹಮ್ಮದ್‌ ಸೊಹಾಲಿ, ಅಬೂಬಕ್ಕರ್‌ ಸಿದ್ಧಿಕ್‌, ಕಿಶನ್‌ ಕುಮಾರ್‌, ಇಲಿಯಾಸ್‌ ಎಂಬ ಯುವಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಐದು ಬೈಕ್‌ಗಳನ್ನೂ ವಶಪಡಿಸಿಕೊಂಡಿದ್ದಾರೆ. ನಗರದ ತೊಕ್ಕೊಟ್ಟು-ಉಳ್ಳಾಲ, ಅಡ್ಯಾರ್‌ ಸೇರಿದಂತೆ ನಾನಾ ಕಡೆ ಬೈಕ್‌ ಸ್ಟಂಟ್‌ ಮಾಡಿದ 8 ಆರೋಪಿಗಳು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಡಿಯೊ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ, ಟೀಕೆ ವ್ಯಕ್ತವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೈಕ್‌ ಸ್ಟಂಟ್‌ಗೆ ಸಂಬಂಧಿಸಿ ನಾಲ್ಕು ಪ್ರಕರಣ ದಾಖಲಾಗಿದೆ. ಬೈಕ್‌ ಸ್ಟಂಟ್‌ಗೆ ವಾಟ್ಸ್ಯಾಪ್‌ ಗ್ರೂಪ್‌: ಅಪಾಯಕಾರಿ ಬೈಕ್‌ ಸ್ಟಂಟ್‌ಗೆ ಸಂಬಂಧಿಸಿ ನಾಲ್ಕು ಪ್ರಕರಣ ದಾಖಲಾಗಿದ್ದು, ಬೈಕ್‌ ಸ್ಟಂಟ್‌ಗಾಗಿಯೇ ಈ ಯುವಕರು ವಾಟ್ಸ್ಯಾಪ್‌ ಗ್ರೂಪ್‌ ಕೂಡ ರಚಿಸಿದ್ದು, ಆ ಗ್ರೂಪ್‌ನಲ್ಲಿ ಮತ್ತಷ್ಟು ಅಪಾಯಕಾರಿ ಬೈಕ್‌ ಸ್ಟಂಟ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್‌ ಸ್ಟಂಟ್‌ ಮಾಡಿದರೆ ಜೋಕೆ: ನಗರದಲ್ಲಿ ವೀಕೆಂಡ್‌ ಸೇರಿದಂತೆ ಇತರ ದಿನಗಳಲ್ಲಿ ರಸ್ತೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ರೇಸಿಂಗ್‌, ಸ್ಟಂಟ್‌ ಮಾಡಿರುವುದು ಕಂಡು ಬರುತ್ತಿದ್ದು, ಇದರ ವಿರುದ್ಧ ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ. ಬೈಕ್‌ ಸ್ಟಂಟ್‌ ಬಗ್ಗೆ ದೂರು ನೀಡಿದವರಲ್ಲಿಯೂ ಮಾಹಿತಿ ಕಲೆ ಹಾಕಲಾಗಿದ್ದು, ಸಾಮಾಜಿಕ ಜಾಲತಾಣಗಳನ್ನು ನಿಗಾ ವಹಿಸುವ ಘಟಕಕ್ಕೂ ಕೆಲವೊಂದು ಕೀವರ್ಡ್‌ಗಳ ಮೂಲಕ ಇನ್‌ಸ್ಟಾಗ್ರಾಂನಲ್ಲಿ ಇಂತಹ ಸ್ಟಂಟ್‌ಗಳನ್ನು ಅಪ್ಲೋಡ್‌ ಮಾಡಿರುವುದು ಕಂಡುಬಂದಿದೆ. ಮಂಗಳೂರು ಕೇಂದ್ರಿತ ಜಾಗ, ರಿಜಿಸ್ಪ್ರೇಶನ್‌ ನಂಬರ್‌, ರಸ್ತೆಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಅಪಾಯಕಾರಿ ವಾಹನ ಚಾಲನೆ, ಸಾರ್ವಜನಿಕ ರಸ್ತೆಗಳಲ್ಲಿ ಸರಕಾರದ ಅನುಮತಿ ಇಲ್ಲದೆ ರೇಸ್‌ ರೀತಿಯಲ್ಲಿ ಓಡಿಸುವಂತಿಲ್ಲ. ಆ ನಿಟ್ಟಿನಲ್ಲಿ ಈ ಪ್ರಕರಣ ದಾಖಲಾಗಿದೆ. ಇನ್ನಷ್ಟು ವಿಡಿಯೊಗಳನ್ನು ಸಾಮಾಜಿಕ ಜಾಲತಾಣ ಘಟಕ ನಿಗಾ ವಹಿಸುತ್ತಿದೆ. ಈಗಾಗಲೇ ಸುಮಾರು 30ಕ್ಕೂ ಅಧಿಕ ವಿಡಿಯೊಗಳು ದೊರಕಿದ್ದು, ಸ್ಟಂಟ್‌ ರೇಸ್‌ ಮಾಡುವ ವಾಹನಗಳನ್ನು ಗುರುತಿಸಲಾಗಿದೆ ಎಂದರು. ವಿಡಿಯೊ ಮಾಡಿದವರ ವಿರುದ್ಧವೂ ಕೇಸು: ಸ್ಟಂಟ್‌ ಮಾಡುವವರ ಜತೆ ಅದನ್ನು ಫಾಲೋ ಮಾಡಿಕೊಂಡು ವಿಡಿಯೊ ಮಾಡುವುದು ಕೂಡ ಅಪಾಯಕಾರಿ ಹಾಗೂ ತಪ್ಪು. ಈ ಬಗ್ಗೆ ಸಾರ್ವಜನಿಕರು ದೂರು ನೀಡುವ ಜತೆಗೆ ಪೋಷಕರೂ ತಮ್ಮ ಮಕ್ಕಳು ವಾಹನವನ್ನು ಯಾವ ರೀತಿಯಲ್ಲಿ ಉಪಯೋಗಿಸುತ್ತಾರೆ ಎಂಬ ಬಗ್ಗೆ ಕಾಳಜಿ ವಹಿಸುವುದು ಅತೀ ಅಗತ್ಯ ಎಂದು ಪೊಲೀಸ್‌ ಕಮಿಷನರ್‌ ಹೇಳಿದ್ದಾರೆ. ವೀಕೆಂಡ್‌ಗಳಲ್ಲಿ ಪಾರ್ಟಿ ಮಾಡಿಕೊಂಡು, ಮದ್ಯ, ಡ್ರಗ್ಸ್‌ ನಶೆ ಮಾಡಿಕೊಂಡು ಇಂತಹ ಸ್ಟಂಟ್‌ ಮಾಡುವ ಕೆಲಸ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಾಹನ ತಪಾಸಣೆ ಸಂದರ್ಭ ವಶಕ್ಕೆ ಪಡೆದಾಗ ವಾದ ಮಾಡುವುದು ಅಥವಾ ಪೊಲೀಸರ ಜತೆ ವಿನಾಕಾರಣ ವಾಗ್ವಾದ ಮಾಡಿದರೆ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರಕರಣವೂ ದಾಖಲು ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/VkgQw34

ಬಿಬಿಎಂಪಿ ಚುನಾವಣೆಗೆ ಶಾಸಕರುಗಳೇ ಅಡ್ಡಗಾಲು! ಕುಂಟುತ್ತಾ ಸಾಗಿದೆ ವಾರ್ಡ್‌ಗಳ ಮರುವಿಂಗಡಣೆ

ನಾಗಪ್ಪ ನಾಗನಾಯಕನಹಳ್ಳಿ ಬೆಂಗಳೂರು: ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್‌ ಸದಸ್ಯರ ಅವಧಿ ಅಂತ್ಯಗೊಂಡು ಒಂದೂವರೆ ವರ್ಷ ಕಳೆದಿದ್ದು, ಚುನಾವಣೆ ನಡೆಯುವುದು ಯಾವಾಗ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ರಾಜಧಾನಿಯನ್ನು ಪ್ರತಿನಿಧಿಸುತ್ತಿರುವ ಶಾಸಕರುಗಳೇ ಚುನಾವಣೆಗೆ ಅಡ್ಡಗಾಲು ಹಾಕುತ್ತಿರುವ ಆರೋಪ ಕೇಳಿಬಂದಿದೆ. ಇದಕ್ಕೆ ಇಂಬು ನೀಡುವಂತೆ ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆ ಕೂಡ ಕುಂಟುತ್ತಾ ಸಾಗಿದೆ. ಚುನಾವಣೆ ವ್ಯಾಜ್ಯವು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದ್ದು, ತೀರ್ಪು ಹೊರಬೀಳುವವರೆಗೆ ಚುನಾವಣಾ ಕನವರಿಕೆ ಮುಂದುವರಿಯಲಿದೆ. ಚುನಾವಣೆ ಕುರಿತ ರಿಟ್‌ ಅರ್ಜಿ ಸಂಬಂಧ ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ಸರಕಾರ ಸಲ್ಲಿಸಿರುವ ಮೇಲ್ಮನವಿಯು ಸುಪ್ರೀಂಕೋರ್ಟ್‌ನಲ್ಲಿ ಇದೇ 25ರಂದು ವಿಚಾರಣೆಗೆ ಬರುವ ಸಾಧ್ಯತೆಗಳಿವೆ. ಪಾಲಿಕೆಗೆ ಚುನಾವಣೆ ನಡೆಸುವುದು ಪಕ್ಷಾತೀತವಾಗಿ ಯಾವುದೇ ಶಾಸಕರಿಗೂ ಇಷ್ಟವಿಲ್ಲ. ಶಾಸಕರು ಮತ್ತು ಜನರ ಮಧ್ಯೆ ಕಾರ್ಪೊರೇಟರ್‌ಗಳು ಕೊಂಡಿಯಾಗಿರುವುದು ಬೇಕಿಲ್ಲ. 2023ರ ವಿಧಾನಸಭೆ ಚುನಾವಣೆ ಬಳಿಕವೇ ಪಾಲಿಕೆಗೆ ಚುನಾವಣೆ ನಡೆಸುವುದು ಒಳಿತು ಎಂಬುದು ಹಲವು ಶಾಸಕರ ಒಮ್ಮತದ ಅಭಿಪ್ರಾಯವಾಗಿದೆ. ಹಾಗಾಗಿಯೇ, ರಾಜ್ಯ ಸರಕಾರವು ಇನ್ನಿಲ್ಲದ ನೆಪ ಹೇಳಿಕೊಂಡು ಚುನಾವಣೆಯನ್ನು ಮುಂದೂಡುತ್ತಲೇ ಇದೆ. ಚುನಾವಣೆಗೆ ಶಾಸಕರೇ ಅಡ್ಡಗಾಲು:ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿರುವ ಹಲವು ಆಕಾಂಕ್ಷಿಗಳು ಟಿಕೆಟ್‌ಗಾಗಿ ತಮ್ಮ ಶಾಸಕರುಗಳ ಬೆನ್ನು ಬಿದ್ದಿದ್ದಾರೆ. ಪ್ರತಿಯೊಂದು ವಾರ್ಡ್‌ನಲ್ಲೂ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷದಿಂದ ಮೂರ್ನಾಲ್ಕು ಮಂದಿ ಆಕಾಂಕ್ಷಿಗಳಿದ್ದಾರೆ. ಇದು ಶಾಸಕರಿಗೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಒಬ್ಬರಿಗೆ ಟಿಕೆಟ್‌ ಕೊಡಿಸಿದರೆ, ಉಳಿದವರು ತಿರುಗಿ ಬೀಳುವುದರಿಂದ ವಿಧಾನಸಭಾ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹೀಗಾಗಿ, ಬಹುತೇಕ ಶಾಸಕರುಗಳು ವಿಧಾನಸಭಾ ಚುನಾವಣೆ ನಂತರವೇ ಪಾಲಿಕೆಗೆ ಚುನಾವಣೆ ನಡೆಸಲು ಒಲವು ತೋರುತ್ತಿದ್ದಾರೆ. ‘ಪಾಲಿಕೆಗೆ ಟಿಕೆಟ್‌ ಕೊಡಿಸುವುದಾಗಿ ಭರವಸೆ ನೀಡಿ, ಆಕಾಂಕ್ಷಿಗಳಿಗೆ ವಿಧಾನಸಭಾ ಚುನಾವಣೆಯ ಖರ್ಚು-ವೆಚ್ಚವನ್ನು ವಹಿಸಲು ಕೆಲ ಶಾಸಕರು ಉದ್ದೇಶಿಸಿದ್ದಾರೆ. ವಿಧಾನಸಭೆಗೆ ಮೊದಲೇ ಪಾಲಿಕೆಗೆ ಚುನಾವಣೆ ನಡೆದರೆ, ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ ಎಂಬುದು ಅವರ ಲೆಕ್ಕಾಚಾರ. ಜತೆಗೆ ಸರಕಾರ ಮತ್ತು ಪಾಲಿಕೆಯಿಂದ ಬಿಡುಗಡೆಯಾಗುವ ಅನುದಾನದ ಪಾಲು ಹಂಚುವುದು ತಪ್ಪುತ್ತದೆ. ಈ ಎಲ್ಲ ಕಾರಣಗಳಿಂದಾಗಿಯೇ ಶಾಸಕರು ಪಾಲಿಕೆಗೆ ಚುನಾವಣೆ ನಡೆಸಲು ಬಿಡುತ್ತಿಲ್ಲ’ ಎಂದು ಬಿಬಿಎಂಪಿ ಮಾಜಿ ಸದಸ್ಯರೊಬ್ಬರು ತಿಳಿಸಿದರು. ನಗರದ ಮೇಲೆ ತಮ್ಮ ನಿಯಂತ್ರಣವೇ ಇರಬೇಕೆಂಬ ಉದ್ದೇಶವೂ ಚುನಾವಣಾ ವಿಳಂಬದ ಹಿಂದಿದೆ. ಶಾಸಕರು, ಸಚಿವರು ಮತ್ತು ಅಧಿಕಾರಿಗಳ ಇಚ್ಛೆಗೆ ತಕ್ಕಂತೆ ಎಲ್ಲವೂ ನಡೆಯುತ್ತಿದೆ. ಅಧಿಕಾರಿಗಳ ಮೂಲಕವೇ ನಗರದ ಆಡಳಿತ ನಡೆಸಬೇಕೆಂಬ ಸರಕಾರದ ತಂತ್ರಗಾರಿಕೆ ಇದರ ಹಿಂದೆ ಅಡಗಿದೆ. ಪಾಲಿಕೆಯ ಟಿಕೆಟ್‌ ಆಕಾಂಕ್ಷಿಗಳು ಮತದಾರರು ಕೈಬಿಟ್ಟು ಹೋಗದಂತೆ ಕಾಪಿಟ್ಟುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಹಣದ ಹೊಳೆ ಹರಿಸುತ್ತಿದ್ದು, ಇದರಿಂದ ಹೈರಾಣಾಗಿ ಹೋಗಿದ್ದಾರೆ. ಕುಂಟುತ್ತಿರುವ ವಾರ್ಡ್‌ ಮರುವಿಂಗಡಣೆ: ಪಾಲಿಕೆ ಗಡಿಯಿಂದಾಚೆಗೆ ಒಂದು ಕಿ.ಮೀ ಸುತ್ತಳತೆಯಲ್ಲಿರುವ ಪ್ರದೇಶಗಳನ್ನೂ ಸೇರಿಸಿಕೊಂಡು ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಹೆಚ್ಚಿಸಲು ರಾಜ್ಯ ಸರಕಾರ ಮುಂದಾಗಿತ್ತು. ಬಳಿಕ ಈ ಪ್ರಸ್ತಾವ ಕೈಬಿಟ್ಟು 198 ವಾರ್ಡ್‌ಗಳ ಪ್ರದೇಶಗಳಲ್ಲೇ 243 ವಾರ್ಡ್‌ಗಳನ್ನು ಸೃಷ್ಟಿಸುವ ತೀರ್ಮಾನ ಕೈಗೊಳ್ಳಲಾಗಿದೆ. ವಾರ್ಡ್‌ಗಳ ಮರುವಿಂಗಡಣೆಗೆ ಪಾಲಿಕೆಯ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟಿರುವ ಸಮಿತಿಯು ಒಂದು ವರ್ಷ ಕಾಲಾವಕಾಶ ನೀಡಿದರೂ ವರದಿ ಸಲ್ಲಿಸಿಲ್ಲ. 2021ರ ಜ. 11ರಿಂದ ಬಿಬಿಎಂಪಿ ಕಾಯಿದೆ ಜಾರಿಗೆ ಬಂದಿತು. ಇದರಂತೆ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ನಿಗದಿಪಡಿಸಲಾಯಿತು. ವಾರ್ಡ್‌ಗಳ ಪುನರ್‌ವಿಂಗಡಣೆಗೆ 6 ತಿಂಗಳ ಅವಧಿಗೆ ಸೀಮಿತವಾಗಿ ಪಾಲಿಕೆಯ ಆಯುಕ್ತರ ಅಧ್ಯಕ್ಷತೆಯಲ್ಲಿ 2021ರ ಜ. 29ರಂದು ಸಮಿತಿ ರಚಿಸಲಾಯಿತು. ಕೋವಿಡ್‌ ಕಾರಣವೊಡ್ಡಿ ಮತ್ತೆ ಸಮಿತಿ ಅವಧಿಯನ್ನು 2021ರ ಜು. 28ರಿಂದ ಜಾರಿಗೆ ಬರುವಂತೆ 6 ತಿಂಗಳಿಗೆ ವಿಸ್ತರಿಸಲಾಯಿತು. ಈ ಅವಧಿಯು ಜನವರಿಗೆ ಮುಗಿದಿದ್ದು, ಇದುವರೆಗೆ ವಾರ್ಡ್‌ಗಳ ಮರುವಿಂಗಡಣೆ ಆಗಿಲ್ಲ. ಈ ಮಧ್ಯೆ ಸಮಿತಿಯ ಅವಧಿಯನ್ನು ಇನ್ನೂ ಎರಡು ತಿಂಗಳು ಕಾಲ ಸರಕಾರ ವಿಸ್ತರಿಸಿದೆ. ರಾಜ್ಯ ಸರಕಾರಕ್ಕೆ ಚುನಾವಣೆ ಮಾಡುವ ಮನಸ್ಸಿದ್ದರೆ, 243 ವಾರ್ಡ್‌ಗಳನ್ನು ರಚಿಸಿ ಅಗತ್ಯ ತಯಾರಿ ಮಾಡಿಕೊಳ್ಳಬೇಕಿತ್ತು. 243 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಸಿದ್ಧವಿರುವುದಾಗಿ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲು ಅವಕಾಶವಿದೆ. ಆದರೆ, ಸರಕಾರಕ್ಕೆ ಚುನಾವಣೆ ನಡೆಸಲು ಆಸಕ್ತಿ ಇಲ್ಲ. ಹೀಗಾಗಿಯೇ, ಸುಪ್ರೀಂಕೋರ್ಟ್‌ನ ತೀರ್ಪಿನ ನೆಪ ಮತ್ತು ವಾರ್ಡ್‌ಗಳ ಮರುವಿಂಗಡಣೆಯ ವಿಳಂಬವನ್ನು ಮುಂದಿಟ್ಟುಕೊಂಡು ಕಾಲ ದೂಡುತ್ತಿದೆ. 2020ರ ಸೆ.10ರಂದು ಪಾಲಿಕೆಯಲ್ಲಿ ಚುನಾಯಿತ ಸದಸ್ಯರ ಅವಧಿ ಅಂತ್ಯಗೊಂಡಿದೆ. ಹಳೆಯ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕೋ ಅಥವಾ 2020ರ ಕಾಯಿದೆಯಂತೆ 243 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕೋ ಎಂಬ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಈ ವ್ಯಾಜ್ಯದ ವಿಚಾರಣೆ ಮುಕ್ತಾಯಗೊಂಡು ತೀರ್ಪು ಹೊರಬಿದ್ದರೂ, ಪಾಲಿಕೆಯ ಚುನಾವಣಾ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಲು ಸಾಧ್ಯವಾಗದ ಸ್ಥಿತಿ ಇದೆ. ಸಿಲಿಕಾನ್‌ ಸಿಟಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕುತಂತ್ರದಿಂದ ಬಿಜೆಪಿ ಸರಕಾರವು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಾಗುವಂತೆ ವಾರ್ಡ್‌ಗಳ ಮರುವಿಂಗಡಣೆ ಮಾಡುತ್ತಿದೆ. ಕಾಂಗ್ರೆಸ್‌ ಪ್ರಾಬಲ್ಯವಿರುವ ಪ್ರದೇಶಗಳನ್ನು ಬೇರೆ ವಾರ್ಡ್‌ಗಳಲ್ಲಿ ವಿಲೀನಗೊಳಿಸಲಾಗುತ್ತಿದೆ ಎಂಬುದು ಕಾಂಗ್ರೆಸ್‌ ಮುಖಂಡರ ಆರೋಪ.


from India & World News in Kannada | VK Polls https://ift.tt/ICFluMW

ನನಗೆ ಮತ್ತು ಮಗನಿಗೆ ಟಿಕೆಟ್‌ ನೀಡೋದು ಕನ್ಫರ್ಮ್‌ ಆದ ಬಳಿಕವಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆ; ಜಿಟಿ ದೇವೇಗೌಡ

ಮೈಸೂರು: ಮೊದಲು ತಮ್ಮ ಪುತ್ರ ಜಿ.ಡಿ ಹರೀಶ್‌ ಗೌಡರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್‌ ನೀಡುತ್ತಾರೆ ಎನ್ನುವುದು ಖಚಿತವಾದ ನಂತರವಷ್ಟೇ ತಾವು ಕಾಂಗ್ರೆಸ್‌ ಸೇರುವ ವಿಚಾರದ ಮಾತುಕತೆ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನಿಂದ ತಮ್ಮ ಮಗ ಜಿ.ಡಿ ಹರೀಶ್‌ ಗೌಡರಿಗೆ ಹಾಗೂ ನನಗೆ ಟಿಕೆಟ್‌ ನೀಡಬೇಕು ಎಂದು ಕೇಳಿದ್ದೇನೆ. ಮೊದಲು ಹರೀಶ್‌ ಗೌಡರ ವಿಷಯ ತೀರ್ಮಾನವಾಗಬೇಕು. ಅವರಿಗೆ ಮೂರು ಕ್ಷೇತ್ರಗಳ ಪೈಕಿ ಯಾವುದಾದರೊಂದು ಕ್ಷೇತ್ರದಲ್ಲಿ ಟಿಕೆಟ್‌ ಕೇಳಿದ್ದೇನೆ. ಮೊದಲ ಆದ್ಯತೆ ಹುಣಸೂರು ಕ್ಷೇತ್ರ. ಎರಡನೇ ಆದ್ಯತೆ ಕೆ.ಆರ್‌ ನಗರ. ಮೂರನೇ ಆದ್ಯತೆ ಮೈಸೂರಿನ ಚಾಮರಾಜ ಕ್ಷೇತ್ರ. ಇವುಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಿಂದ ಅವರಿಗೆ ಟಿಕೆಟ್‌ ನೀಡುವುದಾಗಿ ಭರವಸೆ ದೊರೆಯಬೇಕು. ಬಳಿಕ ಕಾಂಗ್ರೆಸ್‌ ಸೇರುವ ಕುರಿತು ಮಾತುಕತೆ ನಡೆಸುತ್ತೇನೆ. ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ’ ಎಂದು ಜಿ.ಟಿ ದೇವೇಗೌಡರು ಹೇಳಿದರು. ‘ಬಿಜೆಪಿ ಮುಖಂಡರು ಕೂಡ ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ತಮಗೆ ಹಾಗೂ ಪುತ್ರ ಹರೀಶ್‌ ಗೌಡರಿಗೆ ಟಿಕೆಟ್‌ ನೀಡುವ ಭರವಸೆ ನೀಡಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಆರು ತಿಂಗಳ ನಂತರ ಯಾವ ಪಕ್ಷಕ್ಕೆ ಸೇರಬೇಕು ಎನ್ನುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ. ಚಾಮುಂಡೇಶ್ವರಿ ದೇವಿ ಯಾವ ರೀತಿ ಅನುಗ್ರಹಿಸುತ್ತಾಳೆಯೋ ಅದೇ ರೀತಿ ನಾನು ನಡೆದುಕೊಳ್ಳುತ್ತೇನೆ. ಎಲ್ಲಾ ನಿರ್ಧಾರವನ್ನೂ ದೇವಿಗೆ ಬಿಟ್ಟಿದ್ದೇನೆ’ ಎಂದರು. ‘ಜೆಡಿಎಸ್‌ ನಾಯಕರು ಇಲ್ಲಿಯವರೆಗೆ ನನ್ನನ್ನು ಸಂಪರ್ಕಿಸಿಲ್ಲ. ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮಕ್ಕೆ ಕರೆಯುತ್ತಿಲ್ಲ. ಎಚ್‌.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ನಂತರ ನನ್ನ ಸಂಪರ್ಕದಲ್ಲಿ ಇಲ್ಲ’ ಎಂದು ಹೇಳಿದರು.


from India & World News in Kannada | VK Polls https://ift.tt/R307D9Z

ಉಕ್ರೇನ್‌ನಿಂದ ಬಂದವನು ನನ್ನ ಪುತ್ರನಲ್ಲ, ಮೋದಿಯವರ ಮಗ: ತಂದೆಯ ಭಾವುಕ ಮಾತು

ಹೊಸದಿಲ್ಲಿ: ಸಮರ ಪೀಡಿತ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರುವ ಕಾರ್ಯ ಪೂರ್ಣಗೊಂಡಿದ್ದು, ಸಂತ್ರಸ್ತ ಕುಟುಂಬಗಳು ಶನಿವಾರ ಭಾವುಕ ಕ್ಷಣಗಳಿಗೆ ಸಾಕ್ಷಿಯಾದವು. ಹಲವು ದಿನಗಳ ತಳಮಳದ ಬಳಿಕ ಮನೆ ಸೇರಿದ ಮಗನನ್ನು ಕಂಡು ಶ್ರೀನಗರದ ಸಂಜಯ್‌ ಪಂಡಿತ್‌ ಸಂತೋಷದಿಂದ ಕಣ್ಣೀರು ಹಾಕಿದರು. ಉಕ್ರೇನ್‌ನ ಸುಮಿ ನಗರದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಸಂಜಯ್‌ ಪಂಡಿತ್‌ ಅವರ ಪುತ್ರ, ಯುದ್ಧ ಶುರುವಾದ ಬಳಿಕ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಕೀವ್‌, ಕಾರ್ಕಿವ್‌ ನಗರಗಳಿಂದ ಭಾರತೀಯರನ್ನು ಕರೆ ತರುವ ಕಾರ್ಯ ಮುಗಿದರೂ ಸಂಪರ್ಕ ಕಡಿದುಕೊಂಡಿದ್ದ ಸುಮಿ ನಗರದ ವಿದ್ಯಾರ್ಥಿಗಳು ಮಾತ್ರ ಅಲ್ಲಿಯೇ ಸಿಲುಕಿದ್ದರು. ರಷ್ಯಾ ನಿಯಂತ್ರಿತ ಸುಮಿಯಲ್ಲಿ ವಿದೇಶಿಯರಿಗೆ ತೀವ್ರ ಜೀವ ಭೀತಿ ಎದುರಾಗಿತ್ತು. ಪ್ರಧಾನಿ ಅವರು ವಿಶೇಷ ಮುತುವರ್ಜಿ ವಹಿಸಿ ನಡೆಸಿದ ಪ್ರಯತ್ನದ ಫಲವಾಗಿ ಈ ವಿದ್ಯಾರ್ಥಿಗಳು ಸುರಕ್ಷಿತವಾಗಿ ಪಾರಾಗಿದ್ದರು. ಸುಮಿಯಿಂದ ಬಂದ ಭಾರತೀಯ ವಿದ್ಯಾರ್ಥಿಗಳ ಕೊನೆ ತಂಡದಲ್ಲಿ ಸಂಜಯ್‌ ಪಂಡಿತ್‌ ಅವರ ಪುತ್ರ ಕೂಡ ಇದ್ದರು. ಮಗ ಮನೆಗೆ ಬರುತ್ತಿದ್ದಂತೆ ಅತೀವ ಖುಷಿಗೊಂಡ ಪಂಡಿತ್‌, ಗಳಗಳನೆ ಕಣ್ಣೀರು ಹಾಕಿ ಕುಸಿದು ಕುಳಿತರು. ನಂತರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ''ನನ್ನ ಮಗ ಜೀವಂತ ವಾಪಸ್‌ ಬರುತ್ತಾನೆ ಎನ್ನುವ ಆಸೆಯೇ ಇರಲಿಲ್ಲ. ಭಾರತ ಸರಕಾರ, ಅದರಲ್ಲೂ ಪ್ರಧಾನಿ ಮೋದಿ ಅವರು ನಡೆಸಿದ ಪ್ರಯತ್ನದ ಫಲವಾಗಿ ಮಗ ವಾಪಸಾಗಿದ್ದಾನೆ. ಮರು ಹುಟ್ಟುಪಡೆದ ಇವನು ನನ್ನ ಮಗ ಅಲ್ಲ, ಮೋದಿ ಅವರ ಮಗ. ಇವನನ್ನು ಕರೆ ತಂದದ್ದು ಅವರೇ,'' ಎಂದು ಮಗನನ್ನು ತಬ್ಬಿಕೊಂಡು ಪಂಡಿತ್‌ ಭಾವುಕ ನುಡಿಗಳನ್ನಾಡಿದರು. 'ಆಪರೇಷನ್‌ ಗಂಗಾ' ಕಾರ್ಯಾಚರಣೆ ನಡೆಸಿದ ಭಾರತ ಸರಕಾರ, ಉಕ್ರೇನಿನಲ್ಲಿ ಸಿಲುಕಿದ್ದ 18000 ದೇಶವಾಸಿಗರನ್ನು ವಾಪಸ್‌ ಕರೆತಂದಿದೆ. ಏನೂ ಮಾಡದೆ ಇದ್ದಿದ್ದರೆ ಯಾರೂ ಬರುತ್ತಿರಲಿಲ್ಲ! ಉಕ್ರೇನ್‌ ಇಲ್ಲಿಂದ ಶ್ರೀನಿವಾಸ ಪುರನೋ, ಬಸವನ ಗುಡಿಯೋ ಅಷ್ಟು ಹತ್ರ ಇಲ್ಲ. ಮೋದಿ ಸರಕಾರ ಏನೂ ಮಾಡಿಲ್ಲ ಅಂತಿರುವವರ ಹಿಂದೆ ರಾಜಕೀಯದ ಶಂಕೆ ಇದೆ. ಈ ಬಗ್ಗೆ ಮಾತನಾಡೋದಿಲ್ಲ ಎಂದು ಸಂಸದ ತೇಜಸ್ವಿಸೂರ್ಯ ಗುಡುಗಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘‘ಅಲ್ಲಿಂದ ಬಂದ ಕೆಲವು ವಿದ್ಯಾರ್ಥಿಗಳು ಸರಕಾರ ಏನು ಮಾಡಿಲ್ಲ ಎಂದು ಹೇಳುತ್ತಾರೆ. ಉಕ್ರೇನ್‌ನಿಂದ ಬಂದವರು ಅವರೇ ಸ್ವಂತ ಮೊಬೈಲ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿಕೊಂಡು ಬಂದ್ರಾ? ನಮ್ಮ ದೇಶ ಕಳಿಸಿದ ವಿಮಾನದಲ್ಲಿ ಬಂದ್ರಾ? ಏನು ಕೆಲಸ ಮಾಡದೆ ಇದ್ದಿದ್ರೆ ವಿದ್ಯಾರ್ಥಿಗಳು ಬರುತ್ತಿರಲಿಲ್ಲ,’’ಎಂದರು. ‘‘ಉಕ್ರೇನ್‌, ರಷ್ಯಾ ಅಧ್ಯಕ್ಷರ ಜತೆ ಮೋದಿ ನಿರಂತರ ಸಂಪರ್ಕದಿಂದ ಆಪರೇಷನ್‌ ಗಂಗಾ ಹೆಸರಿನಲ್ಲಿ ಉಕ್ರೇನ್‌ನಲ್ಲಿ ಸಿಲುಕಿದ್ದ 19,448 ಭಾರತೀಯರನ್ನು ಏರ್‌ಲಿಫ್ಟ್‌ ಮಾಡಲಾಗಿದೆ. ಇದರಲ್ಲಿ633 ಕನ್ನಡಿಗರು ಸಹಿತ 16 ಸಾವಿರ ಜನ ವಿದ್ಯಾರ್ಥಿಗಳಿದ್ದಾರೆ. 3 ವಾರಗಳಿಂದ ಆಪರೇಶನ್‌ ಗಂಗಾ ಯೋಜನೆಗೆ ನನ್ನ ಕಚೇರಿ ಯಿಂದಲೂ ಸಾಕಷ್ಟು ಕೆಲಸವನ್ನು ಮಾಡಲಾಗಿದೆ,’’’’ ಎಂದರು. ‘‘ಉಕ್ರೇನ್‌ ಭಾರತೀಯ ರಾಯಭಾರ ಕಚೇರಿ ಮೃತ ದೇಹ ಪತ್ತೆ ಮಾಡಿದೆ. ಇಲ್ಲಿಗೆ ತರುವ ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. ಉಕ್ರೇನ್‌ ಯುದ್ಧ ನಡೆಯುತ್ತಿರುವುದರಿಂದ ದೇಹದ ಸ್ಥಿತಿ ಹೇಗಿರುತ್ತೆ ಅನ್ನೋದು ಹೇಳುವುದು ಕಷ್ಟ. ಡಿಎನ್‌ಎ ಪರೀಕ್ಷೆ ಎಲ್ಲವನ್ನು ಕೂಡಾ ಮಾಡಲಾಗುತ್ತಿದೆ,’’ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/1zyv7gI

ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶಾಕ್ ನೀಡಿದ ಎಎಪಿ: ಸಿಧು ಸೇರಿ 122 ರಾಜಕಾರಣಿಗಳ ಭದ್ರತೆ ವಾಪಸ್‌

ಚಂಡೀಗಢ: ಪಂಜಾಬ್‌ನಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮಾಜಿ ಅಧ್ಯಕ್ಷರಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್‌ ಪಡೆಯಲು ನಿಯೋಜಿತ ಮುಖ್ಯಮಂತ್ರಿ ಭಗವಂತ್‌ ಮಾನ್‌ ನಿರ್ಧರಿಸಿದ್ದಾರೆ. ಮಾನ್‌ ಅವರ ನಿರ್ದೇಶನದಂತೆ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದಾರೆ. ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು, ಅವರ ಪತ್ನಿ ಹಾಗೂ ಮಾಜಿ ಶಾಸಕಿ ನವಜೋತ್‌ ಕೌರ್‌ ಸಿಧು ಸೇರಿದಂತೆ 122 ರಾಜಕಾರಣಿಗಳ ಭದ್ರತೆಯನ್ನು ಶನಿವಾರದಿಂದಲೇ ಹಿಂಪಡೆಯಲಾಗಿದೆ. ಇವರಲ್ಲಿ 13 ಮಂದಿ ಮಾಜಿ ಸಚಿವರು, ಒಬ್ಬರು ಮಾಜಿ ಸ್ಪೀಕರ್‌, ಒಬ್ಬರು ಮಾಜಿ ಡೆಪ್ಯೂಟಿ ಸ್ಪೀಕರ್‌ ಸೇರಿದ್ದಾರೆ. ಇವರ ಭದ್ರತೆಗಾಗಿ ನಿಯೋಜಿಸಲಾಗಿದ್ದ 400 ಸಿಬ್ಬಂದಿ ತಮ್ಮ ಮಾತೃ ಘಟಕಗಳಿಗೆ ಮರಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಸಿಧು ಅವರಿಗೆ 2019ರಲ್ಲಿ ಝೆಡ್ ಪ್ಲಸ್ ಹಾಗೂ ಬುಲೆಟ್ ಪ್ರೂಫ್ ಲ್ಯಾಂಡ್ ಕ್ರೂಸರ್ ಒದಗಿಸಲಾಗಿತ್ತು. ನವಜೋತ್ ಸಿಂಗ್ ಸಿಧು, ನವಜೋತ್ ಕೌರ್ ಸಿಧು, ಮನ್‌ಪ್ರೀತ್ ಸಿಂಗ್ ಬಾದಲ್, ಭರತ್ ಭೂಷಣ್ ಆಶು, ರಜಿಯಾ ಸುಲ್ತಾನಾ, ಪರ್ಗತ್ ಸಿಂಗ್, ರಾಣಾ ಗುರ್ಜೀತ್ ಸಿಂಗ್, ಸುಖ್ಬೀರ್ ಸಿಂಗ್ ಸರ್ಕಾರಿಯಾ, ಸಂಜಯ್ ತಲ್ವಾರ್, ನಾಥು ರಾಮ್, ದರ್ಶನ್ ಲಾಲ್, ಅರುಣ್ ನಾರಂಗ್, ತರ್ಲೋಚನ್ ಸಿಂಗ್, ಧರಂಭೀರ್ ಅಗ್ನಿಹೋತ್ರಿ ಮುಂತಾದವರು ಇದರಲ್ಲಿ ಸೇರಿದ್ದಾರೆ. 1991ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ವೇಣು ಪ್ರಸಾದ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದಾರೆ. ಹಕ್ಕು ಮಂಡಿಸಿದ ಮಾನ್‌ ಭಗವಂತ್‌ ಮಾನ್‌ ಅವರು ಶನಿವಾರ ರಾಜ್ಯಪಾಲ ಭನ್ವರಿಲಾಲ್‌ ಪುರೋಹಿತ್‌ ಅವರನ್ನು ಭೇಟಿ ಮಾಡಿ ಸರಕಾರ ರಚನೆ ಹಕ್ಕು ಮಂಡಿಸಿದರು. ನವಾನ್‌ಶಹರ್‌ ಜಿಲ್ಲೆಯಲ್ಲಿರುವ ಸ್ವಾತಂತ್ರ್ಯ ಯೋಧ ಭಗತ ಸಿಂಗ್‌ ಅವರ ಹುಟ್ಟೂರು ಖತ್ಕರ್‌ ಕಲನ್‌ನಲ್ಲಿ ಮಾನ್‌ ಅವರು ತಮ್ಮ ಸಂಪುಟ ಸದಸ್ಯರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಾರ್ಚ್ 16ರಂದು ಮಧ್ಯಾಹ್ನ 12.30ಕ್ಕೆ ಸಮಾರಂಭ ನಡೆಯಲಿದೆ. ''ಇಡೀ ಪಂಜಾಬ್‌ ರಾಜ್ಯದ ಜನತೆಯನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಲಾಗುವುದು. ರಾಜ್ಯದ ಅಭಿವೃದ್ಧಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂಬ ಪ್ರಮಾಣ ವಚನವನ್ನು ರಾಜ್ಯದ ಜನ ಅಂದು ನನ್ನೊಂದಿಗೆ ಸ್ವೀಕರಿಸಲಿದ್ದಾರೆ,'' ಎಂದು ಮಾನ್‌ ತಿಳಿಸಿದರು. ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳ ಪೈಕಿ ಆಪ್‌ 92 ಕ್ಷೇತ್ರಗಳನ್ನು ಗೆದ್ದುಕೊಂಡು ಅಭೂತಪೂರ್ವ ವಿಜಯ ದಾಖಲಿಸಿದೆ. ಹಳ್ಳಿಗಳಲ್ಲಿಕೆಲಸ ಮಾಡಿ ''ಹಳ್ಳಿಗಳಲ್ಲಿ ಇದ್ದುಕೊಂಡು ಕೆಲಸ ಮಾಡಿ. ನೀವು ಹಳ್ಳಿಗಳಿಗೆ ಹೋಗಿ ಜನರನ್ನು ಭೇಟಿ ಮಾಡಬೇಕೇ ಹೊರತು ಅವರು ನಿಮ್ಮನ್ನು ಗೆಲ್ಲಿಸಿದ ಜನ ನಿಮ್ಮನ್ನು ಹುಡುಕಿಕೊಂಡು ಚಂಡೀಗಢಕ್ಕೆ ಬರಬಾರದು,'' ಎಂದು ಭಗವಂತ್‌ ಮಾನ್‌ ಅವರು ತಮ್ಮ ಪಕ್ಷದ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ. ''ನಾವು ಮನೆಮನೆಗೆ ಹೋಗಿ ಮತ ಕೇಳಿದ್ದೇವೆ. ಜನ ನಮ್ಮನ್ನು ಆಶೀರ್ವದಿಸಿದ್ದಾರೆ. ಈಗ ನೀವು ಜನರ ನಡುವೆಯೇ ಇದ್ದು ಕೆಲಸ ಮಾಡಬೇಕು,'' ಎಂದು ಸಲಹೆ ನೀಡಿದ್ದಾರೆ.


from India & World News in Kannada | VK Polls https://ift.tt/7PTW6qA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...