ಅನುದಾನ ಕೊಟ್ಟು ಕಸ ಹಾಕಿ; 250 ಕೋಟಿ ರೂ.ಗೆ ಬೆಂಗಳೂರಿನ ಸ್ಥಳೀಯ ಶಾಸಕರ ಪಟ್ಟು!

ನಾಗಪ್ಪ ನಾಗನಾಯಕನಹಳ್ಳಿ, ಬೆಂಗಳೂರು: ಬಿಬಿಎಂಪಿಯು ಮಿಶ್ರ ಕಸದ ವಿಲೇವಾರಿಗಾಗಿ ನೆಚ್ಚಿಕೊಂಡಿರುವ ಮಿಟಗಾನಹಳ್ಳಿ, ಬಾಗಲೂರು ಭೂಭರ್ತಿ ಕೇಂದ್ರಗಳ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ 250 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಸ್ಥಳೀಯ ಶಾಸಕರು ಬೇಡಿಕೆ ಇಟ್ಟಿದ್ದಾರೆ. ಅನುದಾನ ಕೊಟ್ಟು, ತ್ಯಾಜ್ಯ ವಿಲೇವಾರಿ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಯಲಹಂಕ ಸಮೀಪದ ಮಿಟಗಾನಹಳ್ಳಿ, ಬಾಗಲೂರು ಭೂಭರ್ತಿ ಕೇಂದ್ರವು ಮಹದೇವಪುರ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತವೆ. ಇಲ್ಲಿನ ಶಾಸಕರು ಹಾಗೂ ಸ್ಥಳೀಯ ಗ್ರಾಮಸ್ಥರು ಕ್ವಾರಿಗಳಲ್ಲಿ ಹಾಕಲು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದುವರೆಗೆ ಮಾಡುತ್ತಿದ್ದ ಮಿಟಗಾನಹಳ್ಳಿ ಕ್ವಾರಿಯು ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ, ಪಕ್ಕದಲ್ಲೇ ಇರುವ ಬಾಗಲೂರು ಕ್ವಾರಿಗೆ ಕಸ ಹಾಕಲು ಪಾಲಿಕೆಯು ಸಿದ್ಧತೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ವಿರೋಧ ಶುರುವಾಗಿದೆ. ಇದರಿಂದ ಬಿಬಿಎಂಪಿಯು ಅಡಕತ್ತರಿಯಲ್ಲಿ ಸಿಲುಕಿ ಹಾಕಿಕೊಂಡಿದ್ದು, ನಗರದಲ್ಲಿ ಕಸದ ಸಮಸ್ಯೆ ಬಿಗಡಾಯಿಸುವ ಆತಂಕ ಎದುರಾಗಿದೆ. ಬೆಳ್ಳಹಳ್ಳಿ ಮತ್ತು ಮಿಟಗಾನಹಳ್ಳಿಯ ನಾಲ್ಕು ಕಲ್ಲುಕ್ವಾರಿಗಳು ಕಸದಿಂದ ಭರ್ತಿಯಾಗಿವೆ. ಹೀಗಾಗಿಯೇ, ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬರುವ ಬಾಗಲೂರು ಗ್ರಾಮದ ಸರ್ವೆ ನಂ. 271ರಲ್ಲಿನ ಕ್ವಾರಿಯಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಪಾಲಿಕೆಯು ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ. ಕಲ್ಲುಕ್ವಾರಿಯಲ್ಲಿ ಲೈನರ್‌ ಅಳವಡಿಕೆ, ಲಿಚೆಟ್‌ ಟ್ಯಾಂಕ್‌ ನಿರ್ಮಾಣ, ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ. ಆದರೆ, ಸ್ಥಳೀಯ ಶಾಸಕ ಕೃಷ್ಣಭೈರೇಗೌಡ ಅವರು ಭೂಭರ್ತಿ ಕೇಂದ್ರದ ಸುತ್ತಮುತ್ತಲ ಗ್ರಾಮಗಳನ್ನು ಅಭಿವೃದ್ಧಿಪಡಿಸದೆ, ಮೂಲಸೌಕರ್ಯ ಕಲ್ಪಿಸದೆ ಕಸ ಹಾಕಬೇಡಿ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಅವರು ಮಿಟಗಾನಹಳ್ಳಿಯ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ''ಮಹದೇವಪುರ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಹಳ್ಳಿಗಳ ಅಭಿವೃದ್ಧಿಗೆ 150 ಕೋಟಿ ರೂ. ಹಾಗೂ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಬಾಗಲೂರು, ಬೆಳ್ಳಹಳ್ಳಿ ಭೂಭರ್ತಿ ಕೇಂದ್ರಗಳ ಸುತ್ತಮುತ್ತಲ ಗ್ರಾಮಗಳ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ಒದಗಿಸುವಂತೆ ಸ್ಥಳೀಯ ಶಾಸಕರು ಪ್ರತ್ಯೇಕವಾಗಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಈ ಪ್ರದೇಶಗಳಲ್ಲಿ ಕಸ ವಿಲೇವಾರಿಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದು, ಹಳ್ಳಿಗಳ ಅಭಿವೃದ್ಧಿಗೆ ಅನುದಾನ ನೀಡುವುದು ಸೂಕ್ತವಾಗಿದೆ. ಈ ಸಂಬಂಧ ಸರಕಾರದ ಹಂತದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಒಳಿತು,'' ಎಂದು ತಿಳಿಸಿದ್ದಾರೆ. ಮನೆ ಮನೆಗಳಿಂದ ಹಸಿ ಕಸವನ್ನಷ್ಟೇ ಸಂಗ್ರಹಿಸಿ ವಿಲೇವಾರಿ ಮಾಡುವ ಟೆಂಡರ್‌ ಪ್ರಕ್ರಿಯೆ ಜಾರಿಯಾದ ಬಳಿಕವೂ ತ್ಯಾಜ್ಯ ವಿಂಗಡಣೆಯಲ್ಲಿ ನಿರೀಕ್ಷಿತ ಪ್ರಗತಿ ಆಗಿಲ್ಲ. ಮಂಡೂರು ಬಳಿ ಕಸ ವಿಲೇವಾರಿಗೆ ಸ್ಥಳೀಯರಿಂದ ಸರಣಿ ಪ್ರತಿಭಟನೆಗಳು ನಡೆದಾಗ ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸಲು ಬಿಬಿಎಂಪಿಯು 7 ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿತು. ಇದರಲ್ಲಿ ಮೂರು ಘಟಕಗಳು ಸ್ಥಗಿತಗೊಂಡು ಹಲವು ವರ್ಷಗಳಾಗಿವೆ. ಹೀಗಾಗಿಯೇ, ಪಾಲಿಕೆಯು ಮಿಶ್ರ ಕಸ ವಿಲೇವಾರಿಗೆ ಭೂಭರ್ತಿ ಕೇಂದ್ರಗಳನ್ನು ಅವಲಂಬಿಸುವಂತಾಗಿದೆ. ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ 4200 ಮೆಟ್ರಿಕ್‌ ಟನ್‌ ಘನತ್ಯಾಜ್ಯದ ಪೈಕಿ ಶೇ 71.42ರಷ್ಟು ಅಂದರೆ, 2750 ಟನ್‌ ಕಸವನ್ನು ಭೂಭರ್ತಿ ಕೇಂದ್ರಗಳಲ್ಲಿ ಸುರಿಯಲಾಗುತ್ತಿದೆ. ಪರಿಣಾಮ, ಒಂದಾದ ಮೇಲೆ ಒಂದು ಕ್ವಾರಿಗಳು ಭರ್ತಿಯಾಗುತ್ತಲೇ ಇದ್ದು, ಟೂರಿಂಗ್‌ ಟಾಕೀಸ್‌ನಂತೆ ಪಾಲಿಕೆಯು ಹೊಸ ಕ್ವಾರಿಗಳನ್ನು ಹುಡುಕುವುದು ತಪ್ಪುತ್ತಿಲ್ಲ. ಇದೀಗ ಮಿಟಗಾನಹಳ್ಳಿ ಕ್ವಾರಿ ತುಂಬಿದ್ದು, ಪಕ್ಕದ ಬಾಗಲೂರು ಘಟಕದಲ್ಲಿ ವಿಲೇವಾರಿ ಮಾಡಲು ಸಿದ್ಧತೆ ನಡೆಸಿದೆ. ಇಲ್ಲಿ ಒಂದೂವರೆ ವರ್ಷ ಮಾತ್ರ ಕಸ ವಿಲೇವಾರಿ ಮಾಡಬಹುದು. ಆನಂತರ ಮುಂದೇನು ಎಂಬ ಪ್ರಶ್ನೆಗೆ ಪಾಲಿಕೆ ಬಳಿ ಉತ್ತರವೇ ಇಲ್ಲ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ರಾಜ್ಯ ಸರಕಾರ ಹಾಗೂ ಬಿಬಿಎಂಪಿಯು ಕಳೆದ ನಾಲ್ಕೈದು ವರ್ಷಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳು, ಭೂಭರ್ತಿ ಕೇಂದ್ರಗಳ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಒದಗಿಸಿರುವ ಅನುದಾನವೆಷ್ಟು ಗೊತ್ತೆ? ಬರೋಬ್ಬರಿ 1178.85 ಕೋಟಿ ರೂ. ಆದಾಗ್ಯೂ, ಕಸದ ದುರ್ನಾತ, ಅಂತರ್ಜಲ ಕಲುಷಿತದಿಂದ ಕಂಗೆಟ್ಟಿರುವ ಹಳ್ಳಿಗಳ ಚಿತ್ರಣ ಮಾತ್ರ ಬದಲಾಗಿಲ್ಲ. ಯಶವಂತಪುರ ಕ್ಷೇತ್ರದ ಸೀಗೇಹಳ್ಳಿ, ದೊಡ್ಡಬಿದರಕಲ್ಲು, ಕನ್ನಹಳ್ಳಿ, ಲಿಂಗಧೀರನಹಳ್ಳಿ, ಸುಬ್ಬರಾಯನಪಾಳ್ಯ ಘಟಕಗಳು ನಿತ್ಯ 920 ಟನ್‌ ಕಸ ಸಂಸ್ಕರಣಾ ಸಾಮರ್ಥ್ಯ ಹೊಂದಿವೆ. ಆದರೆ, ಸ್ವೀಕರಿಸುತ್ತಿರುವ ಕಸದ ಪ್ರಮಾಣ ಕೇವಲ 155 ಮೆ.ಟನ್‌ ಮಾತ್ರ. ಆದರೂ, ಈ ಘಟಕಗಳ ಸುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಐದು ವರ್ಷಗಳಲ್ಲಿ ನೀಡಿರುವ ಅನುದಾನ 537.63 ಕೋಟಿ ರೂ. ಯಲಹಂಕ ಕ್ಷೇತ್ರದ ಮಾವಳ್ಳಿಪುರದಲ್ಲಿ ಕಸ ಹಾಕುವುದನ್ನು ನಿಲ್ಲಿಸಿ ಹಲವು ವರ್ಷಗಳು ಕಳೆದಿದ್ದು, ಇಲ್ಲಿನ ಗ್ರಾಮಗಳ ಅಭಿವೃದ್ಧಿಗೆ 200 ಕೋಟಿ ರೂ., ಆನೇಕಲ್‌ನ ಚಿಕ್ಕನಾಗಮಂಗಲ ಘಟಕಕ್ಕೆ 63.25 ಕೋಟಿ ರೂ., ಬೊಮ್ಮನಹಳ್ಳಿ ಕ್ಷೇತ್ರದ ಕೂಡ್ಲುಘಟಕಕ್ಕೆ 108.82 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಆದರೆ, ನಿತ್ಯ 2750 ಟನ್‌ನಷ್ಟು ಮಿಶ್ರ ಕಸವನ್ನು ಒಡಲಲ್ಲಿ ತುಂಬಿಕೊಳ್ಳುತ್ತಿರುವ ಮಿಟಗಾನಹಳ್ಳಿ, ಬೆಳ್ಳಹಳ್ಳಿ, ಬಾಗಲೂರು ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗೆ ಬಿಡಿಗಾಸಿನ ಅನುದಾನ ನೀಡಲಾಗಿದೆ. ಇದು ಸ್ಥಳೀಯ ಶಾಸಕರನ್ನು ಕೆರಳಿಸಿದೆ. ಹಾಗಾಗಿಯೇ, 250 ಕೋಟಿ ರೂ. ಅನುದಾನ ಮಂಜೂರಿಗೆ ಪಟ್ಟು ಹಿಡಿದು ಕುಳಿತಿದ್ದಾರೆ.


from India & World News in Kannada | VK Polls https://ift.tt/3B3lMt4

ಅದಾನಿ ಬಂದರಿನಲ್ಲಿ ಡ್ರಗ್ಸ್‌ ಸಿಕ್ಕಿದ್ದು ಹೇಗೆ? ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಿಂದ ತನಿಖೆಗೆ ಕಾಂಗ್ರೆಸ್‌ ಆಗ್ರಹ

ಬೆಂಗಳೂರು: ಗೌತಮ್‌ ಅದಾನಿ ಕಂಪನಿ ಒಡೆತನದ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಡ್ರಗ್ಸ್‌ ಪತ್ತೆ ಪ್ರಕರಣ ಸಂಬಂಧ ಕೇಂದ್ರ ಬಿಜೆಪಿ ಸರಕಾರದ ಮೌನವೇಕೆ? ಇದು ದೇಶದ ಭದ್ರತೆಗೆ ಅಪಾಯ ಒಡ್ಡುವ ವಿಚಾರವಾಗಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಎಐಸಿಸಿ ವಕ್ತಾರರಾದ ಸುಪ್ರಿಯಾ ಶ್ರೀನಾಥೆ ಒತ್ತಾಯಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮುಂದ್ರಾ ಬಂದರಿನಲ್ಲಿ ಇತ್ತೀಚೆಗೆ 21,000 ಕೋಟಿ ರೂ. ಮೌಲ್ಯದ 3000 ಕೆ.ಜಿ. ಡ್ರಗ್ಸ್‌ ಪತ್ತೆಯಾಗಿದೆ. ಕಳೆದ ಜೂನ್‌ನಲ್ಲಿ ಅಫ್ಘಾನಿಸ್ತಾನದ ಹಸನ್‌ ಹುಸೇನ್‌ ಲಿಮಿಟೆಡ್‌ ಕಂಪೆನಿ 25,000 ಕೆ.ಜಿ. ಅಂದರೆ 1.75 ಲಕ್ಷ ಕೋಟಿ ರೂ. ಮೊತ್ತದ ಹೆರಾಯಿನ್‌ ರಫ್ತು ಮಾಡಿತ್ತು. ಅದು ದೇಶದ ಮಾರುಕಟ್ಟೆಯಲ್ಲಿ ಸರಬರಾಜಾಗುತ್ತಿದೆ. ಹೀಗಾಗಿ ಡ್ರಗ್ಸ್‌ ಸಾಗಣೆ ಮೊದಲಲ್ಲ ಎನ್ನುವುದು ಸ್ಪಷ್ಟ. ಹಾಗಿದ್ದರೂ ಬಂದರು ವ್ಯವಹಾರ ನಡೆಸುತ್ತಿರುವ ಅದಾನಿ ಸಮೂಹದ ವಿಚಾರಣೆ ನಡೆಸುತ್ತಿಲ್ಲ ಎಂದು ಆರೋಪಿಸಿದರು. ಸಿಕ್ಕಿರುವ ಡ್ರಗ್ಸ್‌ಗೆ ಸೆಮಿ ಕಟ್‌ ಟಾಲ್ಕಮ್‌ ಪೌಡರ್‌ ಎಂದು ಹೆಸರಿಸಲಾಗಿದ್ದು, ಈ ಡ್ರಗ್ಸ್‌ ಅನ್ನು ತಾಲಿಬಾನ್‌ ಹಿಡಿತದಲ್ಲಿರುವ ಅಫ್ಘಾನಿಸ್ತಾನದಿಂದ ಆಶಿ ಟ್ರೇಡಿಂಗ್‌ ಕಂಪೆನಿ ಆಮದು ಮಾಡಿಕೊಂಡಿದೆ. ಪ್ರಕರಣ ಸಂಬಂಧ ಆಶಿ ಟ್ರೇಡಿಂಗ್‌ ಕಂಪೆನಿ ಮಾಲೀಕರಾದ ಸುಧಾಕರ್‌ ಮಚ್ವರಮ್‌, ಅವರ ಪತ್ನಿ ಗವಿಂದ ರಾಜು ವೈಶಾಲಿ ಅವರ ಬಂಧನವಾಗಿದೆ. ಸಣ್ಣ ಟ್ರೇಡಿಂಗ್‌ ಕಂಪೆನಿ ಇಷ್ಟು ದೊಡ್ಡ ಮೊತ್ತದ ಡ್ರಗ್ಸ್‌ ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಇದರ ಹಿಂದೆ ಪ್ರಭಾವಿಗಳ ಕೈವಾಡದ ಶಂಕೆಯಿದೆ. ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೌನವೇಕೆ ಎಂದು ಪ್ರಶ್ನಿಸಿದರು. ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥ ಬಿ.ಎಲ್‌.ಶಂಕರ್‌, ಎಐಸಿಸಿ ವಕ್ತಾರರಾದ ಭವ್ಯಾ ನರಸಿಂಹಮೂರ್ತಿ, ಕೆಪಿಸಿಸಿ ಸಂವಹನ ಹಾಗೂ ಮಾಧ್ಯಮ ವಿಭಾಗದ ಸಹ ಸಂಚಾಲಕರಾದ ರಾಮಚಂದ್ರಪ್ಪ, ವಕ್ತಾರ ಸಲೀಂ ಪಾಲ್ಗೊಂಡಿದ್ದರು. ಕೇಂದ್ರ ಸರಕಾರಕ್ಕೆ ದಶಪ್ರಶ್ನೆ?ಕಳೆದ ಜೂನ್‌ನಲ್ಲಿ ಆಮದುಗೊಂಡ 1.75 ಲಕ್ಷ ಕೋಟಿ ರೂ. ಮೌಲ್ಯದ 25,000 ಕೆ.ಜಿ. ಹೆರಾಯಿನ್‌ ನಾಪತ್ತೆಯಾಗಿದ್ದು, ಈ ತನಿಖೆ ಏಕಿಲ್ಲ? ಭಾರತದ ಮಾದಕ ದ್ರವ್ಯ ನಿಯಂತ್ರಣ ಮಂಡಳಿ, ಸಿಬಿಐಐ, ಇಡಿ, ಡಿಆರ್‌ಐ ಸಂಸ್ಥೆಗಳು ಏನು ಮಾಡುತ್ತಿವೆ? ಪ್ರಧಾನಿ, ಕೇಂದ್ರ ಗೃಹ ಸಚಿವರ ಮೌನಕ್ಕೆ ಕಾರಣವೇನು? 18 ತಿಂಗಳಿನಿಂದ ದೇಶದ ಮಾದಕ ದ್ರವ್ಯ ನಿಯಂತ್ರಣ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರ ಹುದ್ದೆ ಖಾಲಿ ಇರುವುದೇಕೆ ಎಂಬುದು ಸೇರಿದಂತೆ ದಶಪ್ರಶ್ನೆಗಳನ್ನು ಸುಪ್ರಿಯಾ ಶ್ರೀನಾಥೆ ಅವರು ಕೇಂದ್ರ ಸರಕಾರಕ್ಕೆ ಕೇಳಿದರು.


from India & World News in Kannada | VK Polls https://ift.tt/3A36fIc

ರಾಜ್ಯದಲ್ಲಿ ಭರ್ತಿಯಾಗುತ್ತಿದೆ ಖಜಾನೆ; ಅಭಿವೃದ್ಧಿ ಕುರಿತು ಯಾಕೆ ಮಾಡಿಲ್ಲ ಇನ್ನೂ ಯೋಚನೆ?!

ಶಶಿಧರ ಹೆಗಡೆ ಬೆಂಗಳೂರು ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಬಳಿಕ ಸಂಪನ್ಮೂಲ ಸಂಗ್ರಹಕ್ಕೆ ಶುಕ್ರದೆಸೆ ಬಂದಿದೆ. ಆದರೆ, ಇದರಿಂದ ಪರಿಸ್ಥಿತಿ ಸುಧಾರಿಸಿದೆ ಎನ್ನುವುದನ್ನು ಬಿಟ್ಟರೆ ರಾಜ್ಯದಲ್ಲಿ ಪರ್ವಕ್ಕೆ ಮರು ಚಾಲನೆ ಸಿಕ್ಕಿಲ್ಲ. ಬಜೆಟ್‌ ಘೋಷಿತ ಯೋಜನೆಗಳ ಜಾರಿಗೆ ಅನುದಾನ ಬಿಡುಗಡೆ ಮಾಡಲು ಈಗಲೂ ಹಿಂದೇಟು ಹಾಕುತ್ತಿರುವುದರಿಂದ ಇಂಥ ಸ್ಥಿತಿ ನಿರ್ಮಾಣವಾಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 2 ತಿಂಗಳ ಕಳೆದಿದೆ. ಕಳೆದ ಮಾರ್ಚ್ ನಲ್ಲಿ ಅಂದಿನ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು 2021-22ರ ವಿತ್ತ ವರ್ಷದ ಮುಂಗಡಪತ್ರ ಮಂಡಿಸುವಾಗ ಅಯೋಮಯ ಎಂಬ ಸ್ಥಿತಿಯಿತ್ತು. ರಾಜ್ಯದ ಆರ್ಥಿಕತೆ ಹಳಿಗೆ ಬರುವ ಖಚಿತ ಭರವಸೆ ಇರಲಿಲ್ಲ. ಹಾಗಾಗಿ ಬಿಎಸ್‌ವೈ ಅವರು ಬಜೆಟ್‌ ಗಾತ್ರವನ್ನು ಹೆಚ್ಚು ಹಿಗ್ಗಿಸಲು ಹೋಗಿರಲಿಲ್ಲ. ಬದಲಾಗಿ ವಿಷಯ ಆರ್ಥಿಕ ಪರಿಸ್ಥಿತಿ ನಡುವೆ ಸಮತೋಲನದ ಬಜೆಟ್‌ ಕೊಡಲು ಯತ್ನಿಸಿದ್ದರು. ಬೊಮ್ಮಾಯಿ ಅವರು ರಾಜ್ಯಭಾರ ಪ್ರಾರಂಭಿಸಿದ ಮೇಲೆ ತೆರಿಗೆ ಸಂಗ್ರಹದಲ್ಲಿ ಚೇತರಿಕೆ ಕಂಡಿದೆ. ಕೋವಿಡ್‌ ನಿರ್ಬಂಧ ಸಡಿಲಗೊಂಡು ಜನಜೀವನ ಯಥಾಸ್ಥಿತಿಗೆ ಮರಳಿರುವುದು ಇದಕ್ಕೆ ಕಾರಣ. ಹಾಗಾಗಿ ಖಜಾನೆಗೆ ಲಕ್ಷ್ಮಿ ಕಟಾಕ್ಷ ದೊರಕಿದಂತಾಗಿದೆ. ಅಂದರೆ ಮೊದಲ ಎರಡು ತ್ರೈಮಾಸಿಕದ ಅಂತ್ಯದ ಹೊತ್ತಿಗೆ ವಾರ್ಷಿಕ ಗುರಿಯಲ್ಲಿ ಶೇ.50ರಷ್ಟು ಸಂಪನ್ಮೂಲ ಕ್ರೋಡೀಕರಣದಲ್ಲಿ ಯಶಸ್ಸು ಸಿಕ್ಕಿದೆ. ತೆರಿಗೆ ಸಂಗ್ರಹ ಪ್ರಕ್ರಿಯೆ ಇದೇ ರೀತಿ ಮುಂದುವರಿದರೆ ರಾಜ್ಯದ ಬೊಕ್ಕಸ ತುಂಬಿ ತುಳುಕಲಿದೆ. ಇದಕ್ಕೆ ತಕ್ಕಂತೆ ಅಭಿವೃದ್ಧಿ ಚಟುವಟಿಕೆ ಗರಿಗೆದರಬೇಕೆಂದು ಜನ ಅಪೇಕ್ಷಿಸುತ್ತಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಸರಕಾರ ಇನ್ನೂ ಗಂಭೀರವಾಗಿ ಗಮನ ಹರಿಸಿದಂತೆ ಕಾಣುತ್ತಿಲ್ಲ. 2 ವರ್ಷದಿಂದಲೂ ಹಿನ್ನಡೆ ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ 2 ವರ್ಷದಿಂದಲೂ ಅಭಿವೃದ್ಧಿ ಯೋಜನೆಗಳಿಗೆ ಹಿನ್ನಡೆಯಾಗಿದೆ. ಸಬ್ಸಿಡಿ ಕಾರ್ಯಕ್ರಮ, ಸಾಮಾಜಿಕ ಭದ್ರತಾ ಯೋಜನೆಗಳಿಗೆ ಹಣ ಹೊಂದಿಸುವುದೇ ಸವಾಲಾಗಿತ್ತು. ಇಷ್ಟು ಸಾಲದೆಂಬಂತೆ ಕೇಂದ್ರದ ತೆರಿಗೆ ಹಂಚಿಕೆ, ಕೇಂದ್ರದ ಸಹಾಯಾನುದಾನ ಬಿಡುಗಡೆಯಲ್ಲೂ ಅನಿಶ್ಚಿತತೆ ಉಂಟಾಗಿತ್ತು. ಹಾಗಾಗಿ ವಿಧಾನಮಂಡಲ ಅಧಿವೇಶನದಲ್ಲೂ ಈ ವಿಚಾರ ಹಲವು ಬಾರಿ ಪ್ರಸ್ತಾಪವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ದೊರಕದಿರುವುದರಿಂದ ಶಾಸಕರು ಕಂಗಾಲಾಗಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಜನರಿಗೆ ಮುಖ ತೋರಿಸುವುದು ಕಷ್ಟವೆಂದು ಆಡಳಿತ ಪಕ್ಷದ ಶಾಸಕರೇ ಪಕ್ಷದ ವೇದಿಕೆಗಳಲ್ಲಿ ಆತಂಕ ತೋಡಿಕೊಂಡಿದ್ದರ ಬಗ್ಗೆ ವರದಿಯಾಗಿದೆ. ಇದು ರಾಜ್ಯದಲ್ಲಿ ವಿಕಾಸದ ರಥವೇ ಮುರಿದು ಬಿದ್ದಿರುವುದಕ್ಕೆ ಸಾಕ್ಷಿಯಾಗಿದೆ. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳಿಗೇ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಹಾಗಾಗಿ ಗುತ್ತಿಗೆದಾರರು ಇಂತಹ ಕೆಲಸಗಳನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ. ಪೂರ್ಣಗೊಂಡ ಕಾಮಗಾರಿಗಳ ಬಿಲ್‌ ಚುಕ್ತಾ ಮಾಡುವ ಪ್ರಕ್ರಿಯೆಯೂ ನಡೆಯುತ್ತಿಲ್ಲ. ಕೋವಿಡ್‌ ನಂತರದಲ್ಲೂ ಹಣಕಾಸು ನಿರ್ಬಂಧ ಸಡಿಲಿಸದೆ ಇರುವುದರಿಂದ ರಾಜ್ಯದ ಅಭಿವೃದ್ಧಿಯೇ ಸ್ಥಗಿತವಾಗುವ ಆತಂಕ ನಿರ್ಮಾಣವಾಗಿದೆ ಎಂಬ ಆಕ್ಷೇಪ ಕೇಳಿ ಬರುತ್ತಿದೆ. ಹಣಕಾಸಿನ ವಾಸ್ತವಿಕತೆ ಏನು? ಸೆಪ್ಟೆಂಬರ್‌ ಅಂತ್ಯದ ವೇಳೆಗೆ ವಾರ್ಷಿಕ ಗುರಿಯ ಶೇ.50ರಷ್ಟು ತೆರಿಗೆ ಸಂಗ್ರಹವಾಗಿದೆ. ಸ್ವಂತ ತೆರಿಗೆ ರಾಜಸ್ವದಡಿ ಒಟ್ಟಾರೆ 1,11,494 ಕೋಟಿ ರೂ. ವಾರ್ಷಿಕ ಗುರಿಯಲ್ಲಿ 43,409 ಕೋಟಿ ರೂ. ಬೊಕ್ಕಸಕ್ಕೆ ಜಮೆಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಇದೇ ಅವಧಿಗೆ ಹೋಲಿಸಿದರೆ ಗಮನಾರ್ಹ ಸುಧಾರಣೆಯಾದಂತಾಗಿದೆ. ಮೋಟಾರು ವಾಹನ ವಿಭಾಗದಲ್ಲಿ ನಿರೀಕ್ಷಿಸಿದಷ್ಟು ತೆರಿಗೆ ಬಾರದಿದ್ದರೂ ವಾಣಿಜ್ಯ ತೆರಿಗೆಯಲ್ಲಿ ಹಿನ್ನಡೆಯಾಗಿಲ್ಲ. ವಾರ್ಷಿಕ 63,765 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹ ಗುರಿಯಲ್ಲಿ 26,227 ಕೋಟಿ ರೂ. ಬಂದಿದೆ. ಅಬಕಾರಿಯಲ್ಲಿ ಯಾವತ್ತೂ ನಷ್ಟದ ಮಾತೇ ಇಲ್ಲ. ಸ್ವಂತ ತೆರಿಗೆಯೇತರ ರಾಜಸ್ವ ಸಂಗ್ರಹದಲ್ಲಿ ನಾಗಾಲೋಟ ಕಂಡು ಬರುತ್ತಿರುವುದು ಈ ಬಾರಿಯ ವಿಶೇಷ. ಹಿನ್ನಡೆಗೆ ಕಾರಣವೇನು?ವಿತ್ತೀಯ ಹೊಣೆಗಾರಿಕೆ ಅಧಿನಿಯಮ ಅನುಸರಿಸಿ ಬಜೆಟ್‌ ಮಂಡಿಸುತ್ತಿರುವುದರಿಂದ ಕೋವಿಡ್‌ ನಡುವೆಯೂ ರಾಜ್ಯದಲ್ಲಿ ಹಣಕಾಸು ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ, ವರ್ಷದಿಂದ ವರ್ಷಕ್ಕೆ ಬದ್ಧತಾ ವೆಚ್ಚದ ಪ್ರಮಾಣ ಹೆಚ್ಚುತ್ತಿರುವುದರಿಂದ ಅಭಿವೃದ್ಧಿ ಯೋಜನೆಗೆ ಹಣವಿಲ್ಲದಂತಾಗಿದೆ. ಕಳೆದ ಹಲವಾರು ವರ್ಷಗಳಿಂದಲೂ ರಾಜಸ್ವ ಕೊರತೆಯ ರಾಜ್ಯಗಳ ಪಟ್ಟಿಯಲ್ಲಿ ಇಲ್ಲ. ಸಂಪನ್ಮೂಲ ಸಂಗ್ರಹದಲ್ಲಿ ಗುರಿ ತಲುಪುತ್ತಿರುವುದು ಇದಕ್ಕೆ ಕಾರಣ. ಇದರ ಹೊರತಾಗಿಯೂ ಸಾಲದ ಪ್ರಮಾಣ ಏರುತ್ತಿದೆ. 2020-21ರಲ್ಲಿ ಬದ್ಧತಾ ವೆಚ್ಚದ ಪ್ರಮಾಣ ಶೇ.102ರಷ್ಟಾಗಿದ್ದರೆ 2021-22ರ ಮಾರ್ಚ್ ಅಂತ್ಯಕ್ಕೆ ರಾಜ್ಯ ಸರಕಾರದ ಸಾಲದ ಒಟ್ಟು ಮೊತ್ತ 4,57,899 ಕೋಟಿ ರೂ. ಆಗಲಿದೆ. ಇದರ ಅಂದಾಜಿನಂತೆ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಗಿಸಲು ಪ್ರಸಕ್ತ ಹಣಕಾಸು ವರ್ಷದಲ್ಲಿ ಬಂಡವಾಳ ವೆಚ್ಚದ ರೂಪದಲ್ಲಿ 44,233 ಕೋಟಿ ರೂ. ಲಭ್ಯವಾಗಲಿದೆ. 2,46,207 ಕೋಟಿ ರೂ. ಆಯವ್ಯಯಕ್ಕೆ ಹೋಲಿಸಿದರೆ ಅಭಿವೃದ್ಧಿ ಯೋಜನೆಗಳಿಗೆ ಬಳಕೆಯಾಗುವ ಈ ಮೊತ್ತ ಅತ್ಯಲ್ಪ. ಈ ನಡುವೆಯೂ ರಸ್ತೆ, ಮೂಲಸೌಕರ್ಯ, ನೀರಾವರಿ ಸೇರಿದಂತೆ ಅನೇಕ ಯೋಜನೆಗಳಿಗೆ ವೆಚ್ಚ ಮಾಡಬೇಕಿದೆ. ಈ ಸವಾಲು ಬೊಮ್ಮಾಯಿ ಸರಕಾರದ ಮುಂದಿದೆ. ಕೇಂದ್ರದಿಂದಲೇ ಖೋತಾ! ಈ ಬಾರಿಯೂ ಕೇಂದ್ರದ ತೆರಿಗೆಯ ಹಂಚಿಕೆಯಲ್ಲಿ ವಿಳಂಬವಾಗುತ್ತಿದೆ. ಆಗಸ್ಟ್‌ ಅಂತ್ಯಕ್ಕೆ 7,754 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, ಇದರಲ್ಲಿ ಶೇ.2.44ರಷ್ಟು ಕೊರತೆ ಆಗಿದೆ. ಹಾಗೆಯೇ ಕೇಂದ್ರದ ಸಹಾಯಾನುದಾನ ಬಿಡುಗಡೆ ವಿಚಾರದಲ್ಲೂ ಶೇ.18.11ರಷ್ಟು ಕೊರತೆ ಇದೆ. ಪ್ರಮುಖಾಂಶ (ಆಗಸ್ಟ್‌ ಅಂತ್ಯಕ್ಕೆ ಅನ್ವಯವಾಗುವಂತೆ)
  • ಶೇ.38.93 ವಾರ್ಷಿಕ ಗುರಿ ಪೈಕಿ ಆಗಸ್ಟ್‌ ಅಂತ್ಯಕ್ಕೆ ಸ್ವಂತ ತೆರಿಗೆ ರಾಜಸ್ವ ಸಂಗ್ರಹ
  • ಶೇ.41.13 ವಾಣಿಜ್ಯ ತೆರಿಗೆ
  • ಶೇ.41.59 ಅಬಕಾರಿ
  • ಶೇ.29.05 ಮೋಟಾರು ವಾಹನ
  • ಶೇ.36.09 ಮುದ್ರಾಂಕ ಮತ್ತು ನೋಂದಣಿ
  • ಶೇ.48.02 ಸ್ವಂತ ತೆರಿಗೆಯೇತರ


from India & World News in Kannada | VK Polls https://ift.tt/2Yid0t4

ಮನೆ ಬಾಗಿಲಿಗೆ ಭೌಗೋಳಿಕ ಮನ್ನಣೆ ಪಡೆದ ಪದಾರ್ಥ; ಅಂಚೆ ಇಲಾಖೆಯಿಂದ ವಿನೂತನ ಸೇವೆ!

ಬೆಂಗಳೂರು: ಭೌಗೋಳಿಕ ಮನ್ನಣೆ ಪಡೆದ ಕರ್ನಾಟಕದ ಹಲವು ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ನಿರ್ಧರಿಸಿದೆ. ಇತ್ತೀಚೆಗಷ್ಟೇ ಭೌಗೋಳಿಕ ಮನ್ನಣೆ ಪಡೆದ 10 ಪದಾರ್ಥ/ವಸ್ತುಗಳ ವಿಶೇಷ ಅಂಚೆ ಲಕೋಟೆಗಳನ್ನು ಇಲಾಖೆ ಬಿಡುಗಡೆ ಮಾಡಿತ್ತು. ಇದೀಗ ಅವುಗಳ ಕುರಿತು ಗ್ರಾಹಕರಿಂದ ಬೇಡಿಕೆ ಬಂದಿದೆ. ಹೀಗಾಗಿ, ಅಮೆಜಾನ್‌ ಮತ್ತಿತರ ಸಂಸ್ಥೆಗಳ ನೇತೃತ್ವದಲ್ಲಿ ಆನ್‌ಲೈನ್‌ ಮೂಲಕ ಭೌಗೋಳಿಕ ಸೂಚ್ಯಂಕವುಳ್ಳ ಪದಾರ್ಥಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಚಿಂತನೆ ನಡೆಸಲಾಗಿದೆ. ಇವುಗಳ ರವಾನೆ, ದರ ಇತ್ಯಾದಿಗಳ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಬೆಂಗಳೂರು ಜಿಪಿಒ ಚೀಫ್‌ ಪೋಸ್ಟ್‌ ಮಾಸ್ಟರ್‌ ಕೆ. ರಾಧಾಕೃಷ್ಣ ತಿಳಿಸಿದರು. ಯಾವ್ಯಾವ ಪದಾರ್ಥಗಳು?: ಕೂರ್ಗ್‌ ಅರೇಬಿಕಾ ಕಾಫಿ, ಚಿಕ್ಕಮಗಳೂರು ಅರೇಬಿಕಾ ಕಾಫಿ, ಬಾಬಾಬುಡನ್‌ಗಿರಿ ಕಾಫಿ, ಮೈಸೂರು ಸಿಲ್ಕ್, ದೇವನಹಳ್ಳಿ ಚಕ್ಕೋತಾ, ಬೆಂಗಳೂರು ಬ್ಲೂಗ್ರೇಫ್ಸ್‌, ಬೆಂಗಳೂರು ರೋಸ್‌ ಆನಿಯನ್‌, ಮೈಸೂರು ಸ್ಯಾಂಡಲ್‌ ಸೋಪ್‌, ಕೊಲ್ಹಾಪುರಿ ಚಪ್ಪಲಿ, ಮೈಸೂರು ಅಗರಬತ್ತಿಗಳು ದೊರೆಯಲಿವೆ. ಇವುಗಳ ಅಂಚೆ ಲಕೋಟೆಗಳೂ ಬಿಡುಗಡೆಯಾಗಿವೆ. ಈ ಎಲ್ಲಾ ಪದಾರ್ಥಗಳು ಇದೀಗ ಅಂಚೆ ಇಲಾಖೆಯ ಇ-ಶಾಪ್‌ನಲ್ಲಿ ಬುಕ್‌ ಮಾಡಿ ಪಡೆಯುವ ಅವಕಾಶವಿದೆ. ಏನಿದು ಜಿಐ ಟ್ಯಾಗ್‌? ಒಂದು ಉತ್ಪನ್ನವನ್ನು ಅದು ಸಿದ್ಧಗೊಳ್ಳುವ ಅಥವಾ ಉತ್ಪಾದನೆ ಆಗುವ ಭೌಗೋಳಿಕ ಸ್ಥಳದಿಂದ ಗುರುತಿಸಿದರೆ, ಅದರ ಆಧಾರದ ಮೇಲೆಯೇ ಅದರ ಗುಣಮಟ್ಟವನ್ನು ನಿರ್ಧರಿಸುವುದಕ್ಕೆ ಭೌಗೋಳಿಕ ಸೂಚ್ಯಂಕ ಅಥವಾ ಜಿಯಾಗ್ರಫಿಕಲ್‌ ಇಂಡಿಕೇಷನ್ಸ್‌ (ಜಿಐ) ಎಂದು ಕರೆಯಲಾಗುತ್ತದೆ. ಹೀಗೆ, ಒಂದು ಸರಕು ಅಥವಾ ವಸ್ತು ಯಾವ ಸ್ಥಳದಲ್ಲಿ ಉತ್ಪಾದನೆಯಾಗಿದೆ ಎಂಬುದರ ಆಧಾರದ ಮೇಲೆ ಅದರ ಗುಣಲಕ್ಷಣಗಳನ್ನು ನಿರ್ಧರಿಸಿ ಅದಕ್ಕೊಂದು ಭೌಗೋಳಿಕ ಸೂಚ್ಯಂಕಗಳನ್ನು ಗುರುತಿಸಲು ಭಾರತದಲ್ಲಿ ಪ್ರತ್ಯೇಕ ಕಾನೂನು ಜಾರಿಯಲ್ಲಿದೆ. ಇವುಗಳ ನೋಂದಣಿ ಮತ್ತು ಸಂರಕ್ಷಣೆಗೆ ಪೇಟೆಂಟ್‌ ಡಿಸೈನ್‌ ಮತ್ತು ಟ್ರೇಡ್‌ ಮಾರ್ಕ್ ಗಳ ಮಹಾನಿಯಂತ್ರಕರು ನಿಯುಕ್ತರಾಗಿರುತ್ತಾರೆ. ನೋಂದಾಯಿತ ವಸ್ತುಗಳನ್ನು ಬೇರೆಯವರು ಅನಧಿಕೃತವಾಗಿ ಬಳಸುವುದನ್ನು ಕಾನೂನು ತಡೆಯುತ್ತದೆ. ಭೌಗೋಳಿಕ ಸೂಚ್ಯಂಕಗಳಿಗೆ ಕಾನೂನಿನ ರಕ್ಷಣೆ ದೊರೆತು ರಫ್ತು ಮಾರುಕಟ್ಟೆ ಹೆಚ್ಚುತ್ತದೆ. ಸಂಬಂಧಿಸಿದ ಭೌಗೋಳಿಕ ಪ್ರದೇಶದಲ್ಲಿ ಆಯಾ ವಸ್ತುಗಳ ಉತ್ಪಾದಕರ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡು ಆ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತದೆ. ಜಿಐ ಮಾನ್ಯತೆ ಪಡೆದ ಭಾರತದ ಉತ್ಪನ್ನಗಳ ಪೈಕಿ ಕರ್ನಾಟಕದ ಉತ್ಪನ್ನಗಳೇ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದು. ಇವುಗಳಿಗೆ ಆನ್‌ಲೈನ್‌ ಮೂಲಕ ಮತ್ತಷ್ಟು ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಹಲವು ಉತ್ಪನ್ನಗಳನ್ನು ಇ-ಶಾಪ್‌ ಮೂಲಕ ಚೆನ್ನಪಟ್ಟಣದ ಆಟಿಕೆಗಳನ್ನು ಕೂಡ ಇ-ಶಾಪ್‌ ಮೂಲಕ ಮಾರಾಟ ಮಾಡಲಾಗುವುದು. ಕೆ. ರಾಧಾಕೃಷ್ಣ, ಚೀಫ್‌ ಪೋಸ್ಟ್‌ ಮಾಸ್ಟರ್‌, ಬೆಂಗಳೂರು ಜಿಪಿಒ


from India & World News in Kannada | VK Polls https://ift.tt/3zWs4t6

ಇ.ಡಿ. ಮುಂದೆ ವಿಚಾರಣೆಗೆ ಹಾಜರಾದ ಜಮೀರ್‌ ಅಹಮ್ಮದ್‌ ಖಾನ್‌

ಬೆಂಗಳೂರು: (ಇ.ಡಿ) ದಾಳಿ ಬಳಿಕ ದಿಲ್ಲಿಯ ಲೋಕನಾಯಕ್‌ ಭವನದಲ್ಲಿರುವ ಕಚೇರಿಗೆ ಶಾಸಕ ಜಮೀರ್‌ ಅಹಮ್ಮದ್‌ ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಗೆ ಬರುವಂತೆ ಅಧಿಕಾರಿಗಳು ಸಮನ್ಸ್‌ ನೀಡಿದ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳ ಮುಂದೆ ಹಾಜರಾದ ಶಾಸಕ ಜಮೀರ್‌, ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. 15 ದಿನಗಳ ಹಿಂದೆಯಷ್ಟೇ ನಾನಾ ದಾಖಲೆಗಳನ್ನು ಇಲಾಖೆಗೆ ಜಮೀರ್‌ ಸಲ್ಲಿಸಿದ್ದರು. ಭೂಮಿ ಖರೀದಿ, ಮನೆ ನಿರ್ಮಾಣ, ಸಾರಿಗೆ ವ್ಯವಹಾರ ಬಗ್ಗೆ ವಿಚಾರಣೆ ವೇಳೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಮನೆ ಮತ್ತು ಕಚೇರಿ ಸೇರಿ 6ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳು ಹಲವು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದರು. ಈ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಕೆಲ ಪ್ರಶ್ನೆಗಳಿಗೆ ಅಧಿಕಾರಿಗಳು ಜಮೀರ್‌ ಬಳಿ ಸ್ಪಷ್ಟನೆ ಕೇಳಿದ್ದರು ಎನ್ನಲಾಗಿದೆ. ವಿಚಾರಣೆ ಬಳಿಕ ಮಾತನಾಡಿದ ಶಾಸಕ ಜಮೀರ್‌, ''ಐಎಂಎ ಪ್ರಕರಣಕ್ಕೂ, ಇ.ಡಿ ವಿಚಾರಣೆಗೂ ಸಂಬಂಧ ಇಲ್ಲ. ಮನೆ ಮೇಲಿನ ದಾಳಿ ಕುರಿತು ಕೆಲ ಮಾಹಿತಿ, ಸ್ಪಷ್ಟನೆ ಕೇಳಿದ್ದರು. ತನಿಖಾಧಿಕಾರಿಗಳಿಗೆ ಸಮರ್ಪಕ ಉತ್ತರ ನೀಡಿದ್ದೇನೆ. ಅಗತ್ಯ ಇದ್ದರೇ ವಿಚಾರಣೆಗೆ ಕರೆಯುವುದಾಗಿ ಹೇಳಿದ್ದಾರೆ. ವಿಚಾರಣೆ ಕುರಿತು ಬಹಿರಂಗ ಹೇಳಿಕೆ ನೀಡಲು ಸಾಧ್ಯವಿಲ್ಲ'' ಎಂದಿದ್ದಾರೆ. ಕಳೆದ ಆ. 5 ರಂದು ಬೆಂಗಳೂರಿನ ಜಮೀರ್‌ ಅಹಮ್ಮದ್‌ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಸತತ 23 ಗಂಟೆಗಳ ಕಾಲ ಮನೆ, ಕಚೇರಿಗಳ ಶೋಧ ನಡೆಸಿದ್ದರು. ಐಎಂಎ ಪ್ರಕರಣದ ತನಿಖೆ ನಡೆಸುತ್ತಿರುವ ಇ.ಡಿ, ಅಕ್ರಮ ಹಣ ವರ್ಗಾವಣೆ ಅನುಮಾನದ ಮೇಲೆ ಜಮೀರ್‌ ಅಹಮ್ಮದ್‌ ನಿವಾಸದ ಮೇಲೆ ದಾಳಿ ನಡೆಸಿತ್ತು. ಹಲವು ಸಲ ಸಮನ್ಸ್‌ ನೀಡಿದರೂ ಇ.ಡಿ ವಿಚಾರಣೆಗೆ ಗೈರು, ಅನಿಲ್‌ ದೇಶ್‌ಮುಖ್‌ ವಿರುದ್ಧ ಕ್ರಮಕ್ಕೆ ಸೂಚನೆ ಮುಂಬಯಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಗೈರು ಹಾಜರಾಗಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶೇಷ ನ್ಯಾಯಾಲಯ ಶುಕ್ರವಾರ ಸೂಚಿಸಿದೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅನಿಲ್‌ ದೇಶಮುಖ್‌ ಅವರಿಗೆ ಹಲವು ಬಾರಿ ಸಮನ್ಸ್‌ ಜಾರಿ ಮಾಡಲಾಗಿದೆ. ಆದರೂ, ಅವರು ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಹಾಗಾಗಿ ಅವರ ವಿರುದ್ಧ ಐಪಿಸಿ ಕಲಂ 174ರ ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ವಿಶೇಷ ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಸೆ. 18ರಂದು ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಪ್ರೇಟ್‌ ಆರ್‌.ಎಂ. ನೆರ್ಲಿಕರ್‌ ಅವರು ಐಪಿಸಿ ಸೆಕ್ಷನ್‌ 174ರ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತೀರ್ಪು ನೀಡಿದ್ದಾರೆ. ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿ ನ್ಯಾಯಾಲಯದ ಆದೇಶ ಪಾಲಿಸದೇ ಉದ್ಧಟತನ ತೋರಿಸಿರುವುದು ಸಾಬೀತಾದರೆ ಈ ಸೆಕ್ಷನ್‌ ಅಡಿಯಲ್ಲಿ ಗರಿಷ್ಠ ಒಂದು ತಿಂಗಳ ಸಾದಾ ಸಜೆ ಅಥವಾ ಗರಿಷ್ಠ 500 ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಜಾರಿ ನಿರ್ದೇಶನಾಲಯ ಜಾರಿಗೊಳಿಸಿದ್ದ ಸಮನ್ಸ್‌ಗಳ ಪೈಕಿ ಕೆಲವು ಸಲ ಸ್ವತಃ ಆರೋಪಿ, ಕೆಲವೊಮ್ಮೆ ಅವರ ಪುತ್ರಿ, ಇನ್ನು ಕೆಲವು ಸಲ ಆರೋಪಿ ಪರವಾಗಿ ಅವರೇ ಸ್ವೀಕರಿಸಿದ್ದಾರೆ. ಆದರೂ ಒಮ್ಮೆಯೂ ವಿಚಾರಣೆಗೆ ಹಾಜರಾಗಿಲ್ಲ ಎಂದು ಇ.ಡಿ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಈ ಪ್ರಕರಣದಲ್ಲಿ ದೇಶಮುಖ್‌ ಅವರ ಇಬ್ಬರು ಸಹಾಯಕರಾದ ಸಂಜೀವ್‌ ಪಲಾಂಡೆ ಮತ್ತು ಕುಂದನ್‌ ಶಿಂಧೆ ಅವರನ್ನು ಬಂಧಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ, ತನಿಖಾ ಸಂಸ್ಥೆಯು ಇತ್ತೀಚೆಗೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ವಜಾಗೊಂಡ ಮುಂಬಯಿ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರನ್ನೂ ಆರೋಪಿಯೆಂದು ಹೆಸರಿಸಿದೆ. ಆದರೆ, ದೇಶಮುಖ್‌ ಅಥವಾ ಅವರ ಕುಟುಂಬ ಸದಸ್ಯರನ್ನು ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳಾಗಿ ಹೆಸರಿಸಿಲ್ಲ. ಗೃಹ ಸಚಿವರಾಗಿದ್ದ ಅನಿಲ್‌ ದೇಶ್‌ಮುಖ್‌ ಅವರು ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರಿಗೆ ಮುಂಬಯಿಯ ಬಾರ್‌ ಮತ್ತು ಹೋಟೆಲ್‌ ಮಾಲೀಕರಿಂದ ಪ್ರತಿ ತಿಂಗಳು 100 ಕೋಟಿ ರೂ. ಹಫ್ತಾ ವಸೂಲು ಮಾಡುವಂತೆ ಆದೇಶಿಸಿದ್ದರು ಎಂದು ಮುಂಬಯಿ ಮಾಜಿ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಅವರು ಆರೋಪಿಸಿದ್ದರು. ಇದೇ ಆರೋಪದ ಕಾರಣದಿಂದ ಎನ್‌ಸಿಪಿ ಮುಖಂಡ ದೇಶ್‌ಮುಖ್‌ ಸಚಿವ ಪದವಿಗೆ ರಾಜೀನಾಮೆ ನೀಡಿದ್ದಾರೆ.


from India & World News in Kannada | VK Polls https://ift.tt/3kYTo5C

ಪ್ರವಾಹ ಪೀಡಿತ ತಾಲೂಕು ಘೋಷಣೆಯಲ್ಲೂ ಕೊಡಗಿಗೆ ಅನ್ಯಾಯ; ಸಚಿವರ ಮಾಹಿತಿಯಲ್ಲೇ ದೋಷ!

ಸುನಿಲ್‌ ಪೊನ್ನೇಟಿ ಮಡಿಕೇರಿ ಮಡಿಕೇರಿ: ಕೊಡಗಿನಲ್ಲಿ ಈ ವರ್ಷದ ಮಳೆಗಾಲದಲ್ಲಿ ಕೇವಲ 5 ಹೆಕ್ಟೇರ್‌ ಪ್ರದೇಶ ಆಗಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಸುರಿದ ಮಳೆಗೆ ಮಡಿಕೇರಿಯೊಂದೇ ಅತಿವೃಷ್ಟಿ ಅಥವಾ ಪ್ರವಾಹಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗಿದೆ. ಇದು ಸರಕಾರದ ಪರವಾಗಿ ಕಂದಾಯ ಸಚಿವ ವಿಧಾನ ಪರಿಷತ್‌ನಲ್ಲಿ ಸೆ. 22ರಂದು ನೀಡಿದ ಮಾಹಿತಿ. ಆದರೆ ವಸ್ತುಸ್ಥಿತಿ ಬೇರೆಯೇ ಇದೆ. ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 2,426.88 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 2466.03 ಮಿ.ಮೀ. ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಈ ವರ್ಷ 3,346.33 ಮಿ.ಮೀ, ಮಳೆಯಾಗಿದ್ದರೆ, ಕಳೆದ ವರ್ಷ 3,448.26 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ 1,993.23 ಮಿ.ಮೀ. ಮಳೆಯಾದರೆ, ಕಳೆದ ವರ್ಷ 2292.25 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ 1941.08 ಮಿ.ಮೀ. ಮಳೆಯಾದರೆ, ಕಳೆದ ವರ್ಷ 1657.59 ಮಿ.ಮೀ. ಮಳೆಯಾಗಿತ್ತು. ಆದರೆ, ಸರಕಾರ ಈ ವರ್ಷ ಘೋಷಿಸಿರುವ ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ 17 ಜಿಲ್ಲೆಗಳಿಗೆ ಸೇರಿದ 99 ತಾಲೂಕುಗಳ ಪಟ್ಟಿಯಲ್ಲಿ ಮಡಿಕೇರಿ ತಾಲೂಕು ಮಾತ್ರ ಸ್ಥಾನ ಪಡೆದುಕೊಂಡಿದೆ. 2019ರಲ್ಲಿ 25 ಜಿಲ್ಲೆಗಳ 119 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿತ್ತು. ಇದರಲ್ಲಿ ಜಿಲ್ಲೆಯ ಅವಿಭಜಿತ ಸೋಮವಾರಪೇಟೆ, ವಿರಾಜಪೇಟೆ ಹಾಗೂ ಮಡಿಕೇರಿ ತಾಲೂಕುಗಳು ಸೇರಿಕೊಂಡಿದ್ದವು. 2020ರಲ್ಲಿ 25 ಜಿಲ್ಲೆಗಳ 180 ಪ್ರವಾಹಪೀಡಿತ ತಾಲೂಕುಗಳ ಪಟ್ಟಿಯಲ್ಲೂ ಜಿಲ್ಲೆಯ ಅವಿಭಜಿತ 2 ಸೇರಿದಂತೆ ಮೂರು ತಾಲೂಕುಗಳು ಇದ್ದವು. ಈ ವರ್ಷವೂ ಜಿಲ್ಲೆಯ ಐದು ತಾಲೂಕುಗಳಲ್ಲೂ ಮಳೆಯಿಂದ ಹಾನಿ ಸಂಭವಿಸಿದ್ದರೂ ಮಡಿಕೇರಿ ತಾಲೂಕು ಮಾತ್ರ ಪ್ರವಾಹ ಪೀಡಿತ ತಾಲೂಕುಗಳ ಪಟ್ಟಿಯಲ್ಲಿರುವುದರಿಂದ ಜಿಲ್ಲೆಯ ಮಳೆಹಾನಿ ಕಾಮಗಾರಿಗಳಿಗೆ ಅನುದಾನದ ಕೊರತೆ ಬೀಳುವ ಆತಂಕ ಎದುರಾಗಿದೆ. 2019ರಲ್ಲಿ ಮಳೆಯಿಂದಾಗಿ ಜಿಲ್ಲೆಯ 9,423 ಹೆ. ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿತ್ತು. 2020ರಲ್ಲಿ ಈ ಪ್ರಮಾಣ 40,722 ಹೆಕ್ಟೇರ್‌ಗೆ ವ್ಯಾಪಿಸಿತ್ತು. ಆದರೆ, ಈ ವರ್ಷ ಕೇವಲ 5 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ ಎನ್ನುತ್ತಿದೆ ಸರಕಾರದ ಮಾಹಿತಿ. ಹಾಗಾಗಿ ಬೆಳೆಹಾನಿ ಸಮೀಕ್ಷೆ ನಡೆಸಲಾಗಿರುವ ಪದ್ಧತಿ ಮತ್ತು ಅನುಸರಿಸಿರುವ ಮಾನದಂಡಗಳ ಬಗ್ಗೆಯೇ ಈಗ ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ. ಮಳೆಯಿಂದ ಬೆಳೆ ಹಾನಿ ಮತ್ತು ಪರಿಹಾರ ವರ್ಷ- ಹಾನಿಗೀಡಾದ ಪ್ರದೇಶ (ಹೆ.) -ಸಂತ್ರಸ್ತರು -ಪರಿಹಾರ ವಿತರಣೆ (ಕೋ.ರೂ.)
  • 2019 -9,423 39-109- 103.14
  • 2020 -40,722- 34,815 -47.99
  • 2021 -5
ಮಳೆಯಿಂದ ಮನೆ ಹಾನಿ ಮತ್ತು ಪರಿಹಾರ ವರ್ಷ- ಒಟ್ಟು ಮನೆ ಹಾನಿ -ಬಿಡುಗಡೆಯಾದ ಪರಿಹಾರ (ಕೋ.ರೂ.) 2019- 2,348 -20.7 2020- 163- 0.39 2021- 102- 0.34 2019ರಲ್ಲಿ 9,423 ಹೆ., 2020ರಲ್ಲಿ 40,722 ಹೆಕ್ಟೇರ್‌ನಲ್ಲಿ ಮಳೆಯಿಂದ ಆಗಿದ್ದ ಬೆಳೆ ಹಾನಿ ಈ ವರ್ಷ ಕೇವಲ 5 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಹೇಗೆ ಸಾಧ್ಯ? ಎಂದು ಪ್ರಶ್ನಿಸುತ್ತಾರೆ ರೈತರು. ಖುದ್ದು ಕಂದಾಯ ಸಚಿವರೇ ಈ ಮಾಹಿತಿ ನೀಡಿದ್ದಾರೆ. ಹಾಗಾದರೆ ಸಚಿವರಿಗೆ ಅಧಿಕಾರಿಗಳು ಕೊಟ್ಟಿರುವ ಮಾಹಿತಿಯಲ್ಲೇ ಲೋಪ ಇದೆಯಾ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ. ಮುದ್ರಣ ದೋಷ ಎಂದಾದರೆ ಇದು ಸಂಬಂಧಿಸಿದವರ ನಿರ್ಲಕ್ಷ್ಯದ ಪರಮಾವಧಿ ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ 2019ರಲ್ಲಿ 119, 2020ರಲ್ಲಿ 180 ಹಾಗೂ 2021ರಲ್ಲಿ 99 ತಾಲೂಕುಗಳನ್ನು ಪ್ರವಾಹಪೀಡಿತ ಎಂದು ಘೋಷಿಸಲಾಗಿದೆ. ಮಳೆಯಿಂದ ಉಂಟಾದ ಬೆಳೆಹಾನಿ ಮತ್ತು ಮನೆ ಹಾನಿಗೆ ಸೂಕ್ತ ಪರಿಹಾರವನ್ನೂ ವಿತರಿಸಲಾಗಿದೆ. ಆರ್‌.ಅಶೋಕ, ಕಂದಾಯ ಸಚಿವ ಮಳೆ ಸುರಿಯಿತ್ತಲೇ ಇರುವುದರಿಂದ ಬೆಳೆಹಾನಿ ಸರ್ವೆ ಕಾರ್ಯ ನಡೆಸಲು ಆಗಸ್ಟ್‌ ಅಂತ್ಯದ ತನಕವೂ ಕಾಯಬೇಕು. ಹಾಗಾದಾಗ ಮಾತ್ರ ಸಂಪೂರ್ಣ ಮಾಹಿತಿ ಸಿಗುತ್ತದೆ. ನಷ್ಟಕ್ಕೆ ಒಳಗಾದ ಕೃಷಿಕನಿಗೆ ಪರಿಹಾರ ಸಿಗುತ್ತದೆ. ಪ್ರವಾಹಪೀಡಿತ ಪ್ರದೇಶ ಎಂದು ಸಂಪೂರ್ಣ ತಾಲೂಕುಗಳನ್ನು ಪರಿಗಣಿಸುವ ಬದಲು ಬೀಳುವ ಮಳೆ ಪ್ರಮಾಣ ಆಧರಿಸಿ ಹೋಬಳಿಯನ್ನು ಗುರುತಿಸುವಂತಾಗಬೇಕು. ಡಾ. ಸಣ್ಣುವಂಡ ಕಾವೇರಪ್ಪ, ಉಪಾಧ್ಯಕ್ಷ, ಬೆಳೆಗಾರರ ಒಕ್ಕೂಟ


from India & World News in Kannada | VK Polls https://ift.tt/3onuqyV

ನಿಟ್ಟೂರಿನಲ್ಲಿ ಸೋಲಾರ್‌ ಶೀತಲ ಘಟಕ 10 ಎಂಟಿ ಉದ್ಘಾಟನೆ ಮಾಡಿದ ಸಚಿವ ಮಾಧುಸ್ವಾಮಿ

ನಿಟ್ಟೂರು: ಕೃಷಿಯಲ್ಲಿ ನಡೆಯುವಂತಹ ಸಂಶೋಧನೆ ಹಾಗೂ ಪ್ರಯೋಗಗಳು ಕೇವಲ ಪುಸ್ತಕದಲ್ಲಿ ಉಳಿದರೆ ಸಾಲದು, ಅದು ಭೂಮಿಯಲ್ಲಿ ಫಲವನ್ನು ನೀಡಿದರೆ ಮಾತ್ರ ಪ್ರಯೋಗ ಹಾಗೂ ಸಂಶೋಧನೆ ಮಾಡಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು. ಗುಬ್ಬಿ ತಾಲೂಕಿನ ಹೋಬಳಿ ತ್ಯಾಗಟೂರು ಗ್ರಾಮದಲ್ಲಿ ಸೆಲ್ಕೋ ಫೌಂಡೇಶನ್‌ ಬೆಂಗಳೂರು, ತೋಟಗಾರಿಕೆ ಇಲಾಖೆ ಮತ್ತು ಹೇಮಾವತಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ನಿಯಮಿತ ತ್ಯಾಗಟೂರು ಇವರ ಸಹಯೋಗದಲ್ಲಿ ಸೋಲಾರ್‌ ಶೀತಲ ಘಟಕ 10 ಎಂಟಿ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತರಕಾರಿ, ಹಣ್ಣು, ಹೂವು ಹೆಚ್ಚು ದಿನ ಇಟ್ಟುಕೊಳ್ಳಲು ಸಾಧ್ಯವಾಗದೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ರೈತರ ಬದುಕು ಅವನತಿಯತ್ತ ಸಾಗುತ್ತಿದೆ. ಕೃಷಿಯಲ್ಲಿ ಬೆಳೆಯುವವರು ಮತ್ತು ಕೊಂಡುಕೊಳ್ಳುವವರು ಪ್ರಗತಿ ಕಾಣುತ್ತಿಲ್ಲ. ಆದರೆ ಇವರ ಮಧ್ಯದಲ್ಲಿ ಕೆಲಸ ಮಾಡುವಂತಹ ಮಧ್ಯವರ್ತಿಗಳು ಶ್ರೀಮಂತರಾಗುತ್ತಿದ್ದಾರೆ. ಅವರು ಬೆಳೆದ ಬೆಳೆಗಳು ಸಂರಕ್ಷಣೆಯಿಂದ ಇದ್ದು, ದರ ಬಂದಾಗ ಮಾರಾಟ ಮಾಡಬೇಕು ಎಂದರೆ ಇಂತಹ ಶೀತಲ ಘಟಕಗಳ ಸ್ಥಾಪನೆ ಅವಶ್ಯಕತೆ ಇದೆ ಎಂದರು. ಹಣ್ಣು, ತರಕಾರಿ, ಹೂವುಗಳನ್ನು ಬೆಳೆಯುವ ರೈತರು ಗ್ರಾಮಗಳಲ್ಲಿ ಒಕ್ಕೂಟಗಳನ್ನು ಮಾಡಿ ಇಂತಹ ಪ್ರಯೋಜನ ಪಡೆದುಕೊಳ್ಳಬೇಕು. ಇದರಲ್ಲಿ ಕೇವಲ ಸಂರಕ್ಷಣೆ ಮಾತ್ರವಲ್ಲದೇ ಸಂಪ್ರದಾಯಿಕವಾಗಿ ಹಣ್ಣು ಮಾಡುವ ವ್ಯವಸ್ಥೆ ಸಹ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಸೆಲ್ಕೋ ಇಂಡಿಯಾದ ಸಿಇಒ ಮೋಹನ್‌ ಹೆಗ್ಡೆ ಮಾತನಾಡಿ, ನಮ್ಮ ಸಂಸ್ಥೆಯು ಸಾಕಷ್ಟು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಸೌರಶಕ್ತಿ ಬಳಸಿಕೊಂಡು ಇಂಧನದ ಒತ್ತಡವನ್ನು ಕಡಿಮೆ ಮಾಡುವುದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ರೈತರಿಗೆ ಅನುಕೂಲವಾದ ಮಾರುಕಟ್ಟೆ, ಶೀತಲ ಘಟಕಗಳು ಇಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುವ ಮೂಲಕ ರೈತರ ಹಿತ ಕಾಯಲು ನಾವು ಬದ್ಧವಾಗಿದ್ದೇವೆ ಎಂದು ತಿಳಿಸಿದರು. ಹೇಮಾವತಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ನಿರ್ದೇಶಕ ಕಿಡಿಗಣ್ಣಪ್ಪ ಮಾತನಾಡಿ, ಗುಬ್ಬಿ ತಾಲೂಕಿನಲ್ಲಿ ಸಾಕಷ್ಟು ತೆಂಗು, ಮಾವು ಬೆಳೆಯುತ್ತಿರುವುದರಿಂದ ಅವುಗಳಿಗೆ ಸಂಬಂಧಪಟ್ಟಂತಹ ವಿಶೇಷ ಯೋಜನೆಗಳನ್ನು ಕಂಪನಿ ಹಾಗೂ ಸರಕಾರ ಮಾಡಿಕೊಡಬೇಕು. ಇದರಿಂದ ಸಾಕಷ್ಟು ರೈತರು ಅಭಿವೃದ್ಧಿಯತ್ತ ಸಾಗುತ್ತಾರೆ ಎಂದು ತಿಳಿಸಿದರು. ಐಐಎಚ್‌ಆರ್‌ ನಿರ್ದೇಶಕ ಬಿ.ಎನ್‌.ಎಸ್‌.ಮೂರ್ತಿ, ತಹಸೀಲ್ದಾರ್‌ ಪಿ.ಆರತಿ, ತೋಟಗಾರಿಕೆ ಇಲಾಖೆ ನಿರ್ದೇಶಕ ರಘು, ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ನಿಯಮಿತ ಅಧ್ಯಕ್ಷ ಕೆ.ಸಿ.ಪ್ರಸಾದ್‌, ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೇ, ಉಪಾಧ್ಯಕ್ಷೆ ವಿದ್ಯಾಧರ, ಮುಖಂಡರಾದ ಎಸ್‌.ಡಿ.ದಿಲೀಪ್‌ಕುಮಾರ್‌, ಚಿದಾನಂದ್‌, ವಿಜಯಕುಮಾರ್‌ ಹಾಗೂ ರೈತ ಕಂಪನಿಯ ನಿರ್ದೆಶಕರು, ರೈತರು ಹಾಜರಿದ್ದರು.


from India & World News in Kannada | VK Polls https://ift.tt/3uxcsLI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...